ಬೈಕ್, ಕಾರು, ಆಟೋರಿಕ್ಷಾ ಪರಸ್ಪರ ಢಿಕ್ಕಿ : ವಿದ್ಯಾರ್ಥಿ ದಾರುಣ ಮೃತ್ಯು; ಮೂವರು ಜಖಂ
ಕಾಸರಗೋಡು: ಬೈಕ್, ಕಾರು ಮತ್ತು ಆಟೋರಿಕ್ಷಾಗಳು ಪರಸ್ಪರ ಢಿಕ್ಕಿ ಹೊಡೆದು ಅದರಲ್ಲಿ ಬೈಕ್ ಸವಾರನಾದ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ನಡೆದಿದೆ.
ಕೋಳಿಯಡ್ಕದ ಚೆಮ್ನಾಡ್ ಗ್ರಾಮ ಪಂಚಾಯತ್ ಕಚೇರಿ ಸಮೀಪದ ಆಯಿಷಾ ಮಂಜಿಲ್ನ ಟಿ.ವಿ. ಮೊಹಮ್ಮದ್ ಅಶ್ರಫ್- ಫಾತಿಮಾ ದಂಪತಿ ಪುತ್ರ ಮಂಗಳೂರಿನ ಖಾಸಗಿ ಕಾಲೇಜಿನ ದ್ವಿತೀಯ ವರ್ಷ ಬಿಕಾಂ ವಿದ್ಯಾರ್ಥಿ ಸಿ.ಎ. ಸಫರುಲ್ ಅಮಾನ್ (೧೯) ಸಾವನ್ನಪ್ಪಿದ ದುರ್ದೈವಿ ಯುವಕ. ಈ ಅಪಘಾತದಲ್ಲಿ ಆಟೋರಿಕ್ಷಾ ಪ್ರಯಾಣಿಕರಾದ ಹೊಸದುರ್ಗ ನಿವಾಸಿಗಳಾಗಿರುವ ಶ್ರೀಜೇಶ್, ವಿಜೇಶ್ ಮತ್ತು ರತೀಶ್ ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೇಕಲ ಪಂಚಾಯತ್ ಮೈದಾನ ಸಮೀಪ ದೊಡ್ಡ ಮಸೀದಿ ಬಳಿಯ ತಿರುವು ರಸ್ತೆಯಲ್ಲಿ ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಅಮಾನ್ ಉದುಮದಿಂದ ಹೊಸದುರ್ಗಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಬೈಕ್ ನಿಯಂತ್ರಣ ತಪ್ಪಿ ಎದುರುಗಡೆ ಯಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದು ರಸ್ತೆಗೆ ಬಿದ್ದು ಅಮಾನ್ನ ತಲೆ ಬಲವಾಗಿ ರಸ್ತೆಗೆ ಬಡಿದಿದೆ. ಗಂಭೀರ ಗಾಯಗೊಂಡ ಆತನನ್ನು ಮೊದಲು ಹೊಸದುರ್ಗದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾರು- ಬೈಕ್ ಅಪಘಾತಕ್ಕೊಳಗಾಗುವ ವೇಳೆ ಹಿಂದುಗಡೆಯಿಂದ ಬರುತ್ತಿದ್ದ ಆಟೋರಿಕ್ಷಾ ಕಾರಿನ ಹಿಂದುಗಡೆ ಢಿಕ್ಕಿ ಹೊಡೆದು ಅದರಲ್ಲಿದ್ದ ಶ್ರೀಜೇಶ್, ವಿಜೇಶ್, ರತೀಶ್ ಎಂಬವರು ಗಾಯಗೊಂಡರು. ಮಾತ್ರವಲ್ಲ ಆ ಆಟೋರಿಕ್ಷಾ ಅಲ್ಲೇ ಪಕ್ಕದ ವಿದ್ಯುತ್ ಕಂಬಕ್ಕೂ ಬಡಿದು ಹಾನಿಗೊಂಡಿದೆ. ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಮೃತ ಅಮಾನ್ ಹೆತ್ತವರ ಹೊರತಾಗಿ ಸಹೋದರ ಅಜ್ಮಲ್ ಮತ್ತು ಸಹೋದರಿ ಅಫ್ನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.