ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬಾಲಕ ಮೃತ್ಯು: ತಾಯಿ ಆಸ್ಪತ್ರೆಯಲ್ಲಿ

ಕಾಸರಗೋಡು: ತಾಯಿ ಜತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.

ಎಡನೀರು ಕಳರಿಯ ಎನ್. ಅರವಿಂದಾಕ್ಷನ್- ಸುಚಿತ್ರ ದಂಪತಿ ಪುತ್ರ, ಪೆರಿಯಡ್ಕ ಪೀಸ್ ಇಂಟರ್ ನ್ಯಾಶನಲ್ ಇಂಗ್ಲಿಷ್ ಮೀಡಿಯಂ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿ ಅನ್‌ಶಿತ್ತ್ (೬) ಸಾವನ್ನಪ್ಪಿದ ಬಾಲಕ.

ಅನ್‌ಶಿತ್ತ್ ತನ್ನ ತಾಯಿ ಸುಚಿತ್ರರ ಜೊತೆ ಡಿಸೆಂಬರ್ ೨೮ರಂದು ಎಡನೀರು- ನೆಲ್ಲಿಕಟ್ಟೆ ನಡುವಿನ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಮಿತ ವೇಗದಲ್ಲಿ ಬಂದ ಬೈಕ್ ಅವರಿಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ತಾಯಿ ಮತ್ತು ಪುತ್ರನನ್ನು ಮೊದಲು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಗಂಭೀರ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಬಳಿಕ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಪುತ್ರ  ಸಾವನ್ನಪ್ಪಿದನು. ಆತನ ತಾಯಿ ಸುಚಿತ್ರ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಇವರು ಪುತ್ರ ಅನ್‌ಶಿತ್ ಕಲಿಯುವ ಶಾಲೆಯ ಅಧ್ಯಾಪಿಕೆಯೂ ಆಗಿದ್ದಾರೆ.

ಮೃತ ಬಾಲಕ ಹೆತ್ತವರ ಹೊರತಾಗಿ ಸಹೋದರ ವಂಶಿತ್ತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಬೈಕ್ ಚಲಾಯಿಸಿದ ಕರ್ನಾಟಕ ವಿಟ್ಲ ನಿವಾಸಿ ಕೃಷ್ಣ ಪ್ರಸಾದ್ (೨೨) ಎಂಬಾತನ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

RELATED NEWS

You cannot copy contents of this page