ಭಜನಾ ಮಂದಿರ ವಿಗ್ರಹದ ಚಿನ್ನದ ಸರ ತೆಗೆದು ನಕಲಿ ಸರ ತೊಡಿಸಿದ ಬಗ್ಗೆ ದೂರು: ಕೇಸು ದಾಖಲು; ಮಾಜಿ ಕಾರ್ಯದರ್ಶಿ ಪೊಲೀಸ್ ಕಸ್ಟಡಿಗೆ
ಕಾಸರಗೋಡು: ಭಜನಾ ಮಂದಿರದ ದೇವರ ವಿಗ್ರಹಕ್ಕೆ ತೊಡಿಸಲಾಗಿದ್ದ ಚಿನ್ನದ ಸರವನ್ನು ತೆಗೆದು ಅದರ ಬದಲು ನಕಲಿ ಚಿನ್ನದ ಸರ ತೊಡಿಸಿದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.
ಕೂಡ್ಲು ಗ್ರಾಮದ ಪಾರೆಕಟ್ಟೆ ಶಾಸ್ತಾನಗರದ ಶ್ರೀ ಅಯ್ಯಪ್ಪ ಭಜನಾ ಮಂದಿರದ ದೇವರ ವಿಗ್ರಹಕ್ಕೆ ತೊಡಿಸಲಾಗಿದ್ದ 2,60,000 ರೂ. ಮೌಲ್ಯದ ನಾಲ್ಕು ಪವನ್‌ನ ಚಿನ್ನದ ಸರವನ್ನು ತೆಗೆದು ಅದರ ಬದಲು ನಕಲಿ ಚಿನ್ನದ ಸರ ತೊಡಿಸಿರುವುದಾಗಿ ಪ್ರಸ್ತುತ ಭಜನಾ ಮಂದಿರದ ಅಧ್ಯಕ್ಷ ವೇಣುಗೋಪಾಲನ್ ಕೆ. ದೂರು ನೀಡಿದ್ದು, ಅದರಂತೆ ಪ್ರಸ್ತುತ ಭಜನಾ ಮಂದಿರದ ಮಾಜಿ ಕಾರ್ಯದರ್ಶಿ ಕೂಡ್ಲು ಹೊಸ ಮನೆ ರಸ್ತೆ ಬಳಿಯ ದಯಾನಂದ ಶೆಟ್ಟಿ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದರಂತೆ ದಯಾನಂದ ಶೆಟ್ಟಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಜನವರಿ ೩೦ರ ಮೊದಲ ಯಾವುದೋ ದಿನದಂದು ವಿಗ್ರಹದಿಂದ ಚಿನ್ನದ ಸರವನ್ನು ತೆಗೆದು ಅದರ ಬದಲು ನಕಲಿ ಸರ ತೊಡಿಸಲಾಗಿದೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಅಧ್ಯಕ್ಷರು ತಿಳಿಸಿದ್ದಾರೆ.