‘ಭಾವಗಾಯಕ’ ಪಿ.ಜಯಚಂದ್ರನ್ ನಿಧನಕ್ಕೆ ಸಹಸ್ರರಿಂದ ಅಶ್ರುತರ್ಪಣ
ತೃಶೂರು: ಪ್ರೀತಿ, ಹಂಬಲ ಮತ್ತು ಭಕ್ತಿಯಂತಹ ಭಾವನೆಗಳನ್ನು ಸುಂ ದರವಾಗಿ ವ್ಯಕ್ತಪಡಿಸುವ ಭಾವಪೂರ್ಣ ಗಾಯನಕ್ಕಾಗಿ ಪ್ರೀತಿಯಿಂದ ಭಾವ ಗಾಯಕನ್ ಎಂದೇ ಕರೆಯಲ್ಪಡುತ್ತಿರುವ ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕ ಪಿ. ಜಯಚಂದ್ರನ್ (80) ನಿನ್ನೆ ತೃಶೂರಿನಲ್ಲಿ ನಿಧನಹೊಂದಿದರು. ಇವರು ನಿನ್ನೆ ತಮ್ಮ ನಿವಾಸದಲ್ಲಿ ಕುಸಿದುಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅವರು ನಿಧನಹೊಂದಿದರು.
ಮಲೆಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 16,000ಕ್ಕೂ ಹೆಚ್ಚು ಹಾಡುಗಳನ್ನು ಜಯಚಂದ್ರನ್ ಹಾಡಿದ್ದಾರೆ. 1970 ಮತ್ತು 80ರ ದಶಕದಲ್ಲಿ ಹೊರಬಂದ ಅವರ ಅನೇಕ ಹಾಡುಗಳು ಇಂದಿಗೂ ತಲೆಮಾರುಗಳ ಸಂಗೀತ ಪ್ರಿಯರಿಗೆ ನಿತ್ಯ ಹರಿದ್ವರ್ಣವಾಗಿ ಉಳಿದಿದೆ. ಕೊನೆಯದಾಗಿ ಅವರು ಕಳೆದ ವರ್ಷ ನವಂಬರ್ 24ರಂದು ಗುರು ವಾಯೂರು ದೇವಸ್ಥಾನದ ಸಭಾಂಗಣದಲ್ಲಿ ಭಕ್ತಿಗೀತೆ ಹಾಡಿದ್ದರು.
ಮಲೆಯಾಳಂನಲ್ಲಿ ಮಾತ್ರವಾಗಿ ಅವರು 2000ದಷ್ಟು ಹಾಡುಗಳನ್ನು ಹಾಡಿದ್ದರು. ಮೂರು ಮಲೆಯಾಳಂ ಸಿನಿಮಾ ಮತ್ತು ಆಲ್ಬಮ್‌ನಲ್ಲಿ ನಟಿಸಿದ್ದಾರೆ. ಉತ್ತಮ ಗಾಯನಕ್ಕಾಗಿ ಅವರು ಒಮ್ಮೆ ಕೇಂದ್ರ ಪುರಸ್ಕಾರ, ಐದು ಬಾರಿ ಕೇರಳ ರಾಜ್ಯ ಪುರಸ್ಕಾರ ಹಾಗೂ ನಾಲ್ಕು ಬಾರಿ ತಮಿಳು ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದರ ಹೊರತಾಗಿ ಸ್ವರಾಲಯ-ಕೈರಳಿ-ಜೇಸುದಾಸ್ ಪುರಸ್ಕಾರ, ಹರಿವರಾಸನಂ ಸೇರಿದಂತೆ ಹಲವು ಪುರಸ್ಕಾರಗಳನ್ನು ಪಡೆದಿದ್ದಾರೆ. ಮೃತರು ಪತ್ನಿ ಲಲಿತ, ಮಕ್ಕಳಾದ ಲಕ್ಷ್ಮಿ, ದಿನನಾಥನ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
೬೦ ದಶಕಗಳ ತನಕ ಸಂಗೀತಾ ಸ್ವಾದಕರನ್ನು ಸಂಗೀತ ಸಾಗರದಲ್ಲಿ ತೇಲಾಡಿಸಿದ ಇವರ ಅಂತ್ಯಕ್ರಿಯೆ ನಾಳೆ ಅಪರಾಹ್ನ ೩.೩೦ಕ್ಕೆ ಪರವೂರ್ ಚಂದಮಂಗಲದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಲಿದೆ. ಪಾರ್ಥೀವ ಶರೀರವನ್ನು ಇಂದು ಬೆಳಿಗ್ಗೆ ಸಂಗೀತ ನಾಟಕ ಅಕಾಡೆಮಿ ಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸ ಲಾಗಿದೆ. ಸಂಗೀತ, ಸಿನಿಮಾ, ಸಾಂಸ್ಕೃತಿಕ ಲೋಕದ ಹಲವು ಗಣ್ಯರು ಹಾಗೂ ಭಾರೀ ಜನ ಪ್ರವಾಹವೇ ಹರಿದು ಬಂದು ಅಂತಿಮ ದರ್ಶನ ನಡೆಸಿದರು.