ಮಂಗಳೂರು ಜೈಲಿನಲ್ಲಿದ್ದ ಬಂದ್ಯೋಡು ನಿವಾಸಿ ಆಸ್ಪತ್ರೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ಗಾಂಜಾ ಪ್ರಕರಣದಲ್ಲಿ ಸೆರೆಗೀಡಾಗಿ ಮಂಗಳೂರಿನ ಜೈಲಿನಲ್ಲಿದ್ದ ಬಂದ್ಯೋಡು ಬಳಿಯ ನಿವಾಸಿ ಯುವಕ ಆಸ್ಪತ್ರೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಂದ್ಯೋಡು ಮಳ್ಳಂಗೈ ಕುರ್ಮ ಎಂಬಲ್ಲಿನ ದಿ| ಎಂ.ಪಿ ಅಬ್ದುಲ್ ರಹ್ಮಾನ್‌ರ ಪುತ್ರ ಮುಹಮ್ಮದ್ ನೌಫಲ್ (26) ಮೃತಪಟ್ಟ ಯುವಕನಾಗಿದ್ದಾನೆ. ಇಂದು ಮುಂಜಾನೆ 3.45 ರ ವೇಳೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಕೊಠಡಿಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಮನೆಯವರಿಗೆ ಮಾಹಿತಿ ಲಭಿಸಿದೆ.
2022 ಡಿಸೆಂಬರ್ 26ರಂದು ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದಾಗ ಮುಹಮ್ಮದ್ ನೌಫಲ್ ನನ್ನು ಅಲ್ಲಿನ ಪೊಲೀಸರು ಸೆರೆಹಿಡಿದಿದ್ದರೆಂದು ಹೇಳಲಾಗುತ್ತಿದೆ. ಬಳಿಕ ಆತನನ್ನು ಮಂಗಳೂರಿನ ಜೈಲಿನಲ್ಲಿರಿಸಲಾಗಿತ್ತು. ಈಮಧ್ಯೆ ಕಳೆದ ಎಪ್ರಿಲ್ ೨೫ರಂದು ಜೈಲಿನಲ್ಲಿ ಮುಹಮ್ಮದ್ ನೌಫಲ್‌ಗೆ ಅಸೌಖ್ಯವುಂಟಾಗಿತ್ತೆನ್ನಲಾಗಿದೆ. ಇದರಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಪೊಲೀಸರ ಕಾವಲು ಏರ್ಪಡಿಸಲಾಗಿತ್ತು. ನಿನ್ನೆ ರಾತ್ರಿ ನಿದ್ರಿಸಿದ್ದ ಮುಹಮ್ಮದ್ ನೌಫಲ್ ಮಂಚದ ಕಾಲಿಗೆ ಬೆಡ್ ಶೀಟ್ ಕಟ್ಟಿ ಅದನ್ನು ತನ್ನ ಕುತ್ತಿಗೆಗೆ ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಇಂದು ಮುಂಜಾನೆ ವೇಳೆ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಸಂಬಂಧಿಕರು ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದಾರೆ. ಇದೇ ವೇಳೆ ಮುಹಮ್ಮದ್ ನೌಫಲ್‌ನ ಸಾವಿನಲ್ಲಿ ನಿಗೂಢತೆಗಳಿವೆಯೆಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ. ಮುಹಮ್ಮದ್ ನೌಫಲ್ ದಾಖಲಾಗಿದ್ದ ಕೊಠಡಿಗೆ ಪೊಲೀಸರು ಕಾವಲುನಿರತರಾಗಿದ್ದಾಗ ಆತ ಈಕೃತ್ಯವೆಸಗಿರುವುದು ಹೇಗೆಂದು ಸಂಬಂಧಿಕರು ಪ್ರಶ್ನಿಸುತ್ತಿದ್ದಾರೆ.
ಮೃತರು ತಾಯಿ ಅಲೀಮ, ಸಹೋದರ-ಸಹೋದರಿಯರಾದ ಮುಹಮ್ಮದ್ ನಜೀಬ್, ಮುಹಮ್ಮದ್ ನದೀಂ, ನಾಸಿತ್, ನಾಸಿನ, ನೂರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.