ಮಂಜೇಶ್ವರ ಸಹಿತ ಹಲವು ಚಿನ್ನದಂಗಡಿಗಳ ದರೋಡೆ ಪ್ರಕರಣ: ಕುಖ್ಯಾತ ಆರೋಪಿ ಸೆರೆ

ಮಂಜೇಶ್ವರ: ಮಂಜೇಶ್ವರ ಸೇರಿದಂತೆ ಹಲವು ಜ್ಯುವೆಲ್ಲರಿ ದರೋಡೆ ಪ್ರಕರಣದ ಕುಖ್ಯಾತ ಅಂತಾರಾಜ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ನಾಮಕ್ಕಲ್ ನಿವಾಸಿ ವೇಲಾಯುಧನ್ ನಲ್ಲಮುತ್ತು (೪೭) ಬಂಧಿತ ಆರೋಪಿ ಯಾಗಿದ್ದಾನೆ.

ಮಂಜೇಶ್ವರ, ತೃಶೂರು, ಕಲ್ಲೂರು, ಸೇಲಂ ಮತ್ತು ನಾಮಕ್ಕಲ್‌ನಲ್ಲಿ ಇತ್ತೀಚೆಗೆ ಹಲವು ಚಿನ್ನದಂಗಡಿಗಳಲ್ಲಿ ನಡೆದ ದರೋಡೆ ಪ್ರಕರಣಗಳ ಆರೋಪಿಯಾಗಿದ್ದಾನೆ ಬಂಧಿತ ವೇಲಾಯುಧನ್ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಯಂಬತ್ತೂರು ಉಕ್ಕಡದಿಂದ ಪಯ್ಯನ್ನೂರು ಪೊಲೀಸರು ಆರೋಪಿಯನ್ನು  ಬಂಧಿಸಿದ್ದಾರೆ. ಕಳೆದ ತಿಂಗಳ ೧೩ರಂದು ಪಯ್ಯನ್ನೂರಿನ ಚೇನಾಟ್ ಜ್ಯುವೆಲ್ಲರಿಯ ಚಿನ್ನದೊಡವೆ ನಿರ್ಮಾಣ ಕೊಠಡಿಗೆ ನುಗ್ಗಿ ಅಲ್ಲಿಂದ ಮೂರು ಕಿಲೋ ಬೆಳ್ಳಿ ಕಳವುಗೈದ ಪ್ರಕgಣಕ್ಕೆ ಸಂಬಂಧಿಸಿ ಈತನನ್ನು ಈಗ ಬಂಧಿಸಲಾಗಿದೆ. ಈ ಜ್ಯುವೆಲ್ಲರಿಯಲ್ಲಿ ಕಳವು ನಡೆಸುವ ಮೊದಲು ಆರೋಪಿ ಅಲ್ಲಿನ ಸಿಸಿ ಟಿವಿ ಕ್ಯಾಮರಾಗಳನ್ನು ಒಡೆದು ಹಾನಿಗೊಳಿಸಿ ನಂತರ ಕಳವು ನಡೆಸಿದ್ದನೆಂದು ಪೊಲೀಸರು  ತಿಳಿಸಿದ್ದಾರೆ. ಆ ಚಿನ್ನದಂಗಡಿಯ ಸಿಸಿ ಟಿವಿ ಕ್ಯಾಮರಾಗಳನ್ನು ಆರೋಪಿ ಹಾನಿಗೊಳಿಸಿದ್ದರೂ  ಅದರ ಪಕ್ಕದಲ್ಲಿರುವ ಸಂಸ್ಥೆಗಳು ಮತ್ತು ರಸ್ತೆ ಬದಿಯ ಸಿಸಿ ಟಿವಿ ಕ್ಯಾಮರಾಗಳಲ್ಲಿ ಆತನ ದೃಶ್ಯ ಗೋಚರಿಸಿತ್ತು. ಈ ಎಲ್ಲಾ ದೃಶ್ಯಗಳನ್ನು  ಪೊಲೀಸರು ಕ್ರೋಢೀಕರಿಸಿ ಪರಿಶೀಲಿಸಿದಾಗ ದರೋಡೆ  ಬಳಿಕ ಆರೋಪಿ ಆಟೋ ರಿಕ್ಷಾವೇರಿ ಶ್ರೀಕಂಠಾಪುರಕ್ಕೂ, ಅಲ್ಲಿಂದ ಇನ್ನೊಂದು ಆಟೋ ರಿಕ್ಷಾದಲ್ಲಿ ಕಣ್ಣೂರಿಗೂ, ನಂತರ   ತಮಿಳುನಾಡಿಗೆ ಹೋಗುವ ರೈಲು ಏರಿ ಹೋಗುತ್ತಿರುವ ದೃಶಗಳು ಗೋಚರಿಸಿತ್ತು.  ಅದರ ಜಾಡು ಹಿಡಿದು ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಕೊಯಂಬತ್ತೂರಿನ ಉಕ್ಕಡದಿಂದ ಸೆರೆಹಿಡಿಯುವಲ್ಲಿ  ಸಫಲರಾಗಿದ್ದಾರೆ. ಕದ್ದ ಆಭರಣಗಳನ್ನು ಆರೋಪಿ ಕೊಯಂಬತ್ತೂರಿನ ಕೆಲವು ಚಿನ್ನದಂಗಡಿಗಳಿಗೆ ಮಾರಾಟ ಮಾಡಿದ್ದನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ವೇಲಾಯುಧನ್ ಮತ್ತು ಆತನ ಕುಟುಂಬದವರು ಚಿನ್ನದೊಡವೆ ತಯಾರಿಸುವ ಅಂಗಡಿಗಳ ಮುಂದಿನ ಮಣ್ಣು ಸಂಗ್ರಹಿಸಿ, ಅದನ್ನು ನೀರಿನಲ್ಲಿ ಗಾಳಿಸಿ ಅದರಲ್ಲಿ ಒಳಗೊಂಡಿರುವ ಚಿನ್ನದ ಅಂಶವನ್ನು  ತೆಗೆದು ಅದನ್ನು ಮಾರಾಟಮಾಡಿ ಉಪಜೀವನ ನಡೆಸುವವರಾಗಿದ್ದಾರೆ. ಹೀಗೆ ಚಿನ್ನದಂಗಡಿಯ ಮುಂದಿನ ಮಣ್ಣು  ತೆಗೆಯುವ ವೇಳೆ  ಆರೋಪಿ ಎಲ್ಲ್ಲಾ  ಅಂಗಡಿಗಳ ಪೂರ್ಣ ಮಾಹಿತಿ ಸಂಗ್ರಹಿಸಿ    ಬಳಿಕ ರಾತ್ರಿ ವೇಳೆ ಅಲ್ಲಿಗೆ ನುಗ್ಗಿ ಕಳವು ನಡೆಸುವುದು ಆತನ ರೀತಿಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page