ಶಬರಿಮಲೆ: ಮಂಡಲ ಪೂಜೆ ವೇಳೆ ಶ್ರೀ ಅಯ್ಯಪ್ಪ ಸ್ವಾಮಿಗೆ ತೊಡಿಸಲಿರುವ ತಂಗ ಅಂಗಿ ಒಳಗೊಂಡ ರಥ ಶೋಭಾಯಾತ್ರೆ ನಾಳೆ ಬೆಳಿಗ್ಗೆ ೭ಕ್ಕೆ ಆರನ್ಮುಳ ಶ್ರೀ ಪಾರ್ಥಸಾರಥಿ ಕ್ಷೇತ್ರದಿಂದ ಹೊರಡಲಿದೆ. ವಿವಿಧ ಕ್ಷೇತ್ರಗಳಲ್ಲಿ ಸ್ವಾಗತ ನೀಡಿದ ಬಳಿಕ ೨೬ರಂದು ಮಧ್ಯಾಹ್ನ ೧.೩೦ಕ್ಕೆ ಪಂಪಾಕ್ಕೆ ತಲುಪಲಿದೆ. ಪಂಪಾದ ಶ್ರೀ ಗಣಪತಿ ಕ್ಷೇತ್ರದಲ್ಲಿ ಭಕ್ತರಿಗಾಗಿ ದರ್ಶನಕ್ಕಿರಿಸಲಾಗುವುದು. ೩ ಗಂಟೆಗೆ ಅಲ್ಲಿಂದ ಗುರುಸ್ವಾಮಿಗಳು ನೀಲಿಮಲೆ, ಅಪ್ಪಾಡಿಮೇಡು, ಶಬರಿಪೀಠ ಮೂಲಕ ಸಂಚರಿಸಿ ಸಂಜೆ ೫ಕ್ಕೆ ಶರಂಕುತ್ತಿಗೆ ತಲುಪಿಸುವರು. ಅಲ್ಲಿಂದ ದೇವಸ್ವಂ ಪೊಲೀಸ್ ಅಧಿಕಾರಿಗಳು ಪಡೆದು ಸನ್ನಿಧಾನಕ್ಕೆ ತಲುಪಿಸಲಿದ್ದಾರೆ. ಬಳಿಕ ತಂತ್ರಿವರ್ಯರು ಹಾಗೂ ಮುಖ್ಯ ಅರ್ಚಕರು ತಂಗಅಂಗಿಯನ್ನು ಗರ್ಭಗುಡಿಗೆ ಕೊಂಡೊಯ್ದು ಅಯ್ಯಪ್ಪ ಸ್ವಾಮಿಗೆ ತೊಡಿಸಿ ದೀಪಾರಾಧನೆ ನಡೆಸುವರು. ೨೭ರಂದು ಬೆಳಿಗ್ಗೆ ೧೦.೩೦ ಹಾಗೂ ೧೧ ಗಂಟೆ ಮಧ್ಯೆ ಮಂಡಲ ಪೂಜೆ ನಡೆಯಲಿದೆ. ಇದೇ ವೇಳೆ ತಂಗಅಂಗಿ ಶೋಭಾಯಾತ್ರೆ ಸನ್ನಿಧಾನಕ್ಕೆ ತಲುಪುವ ಡಿ.೨೬ರಂದು ತೀರ್ಥಾಟಕರಿಗೆ ನಿಯಂತ್ರಣವಿರುವುದು. ಅಂದು ಮಧ್ಯಾಹ್ನ ಪೂಜೆ ಬಳಿಕ ಗರ್ಭಗುಡಿ ಬಾಗಿಲು ಮುಚ್ಚಿದರೆ ಸಂಜೆ ತಂಗಅಂಗಿ ಶೋಭಾಯಾತ್ರೆ ಸನ್ನಿಧಾನಕ್ಕೆ ತಲುಪುವವರೆಗೆ ಹದಿನೆಂಟು ಮೆಟ್ಟಿಲೇರಲು ಅವಕಾಶವಿರುವುದಿಲ್ಲ. ಅದೇ ರೀತಿ ಪಂಪಾದಿಂದ ಸನ್ನಿಧಾನಕ್ಕೆ ತೆರಳುವ ಭಕ್ತರಿಗೆ ಮಲೆಯೇರಲು ಮಧ್ಯಾಹ್ನ ಬಳಿಕ ನಿಯಂತ್ರಣವಿರುವುದು. ಇದೇ ವೇಳೆ ಮಂಡಲ ಪೂಜೆ ಸಂದರ್ಭದಲ್ಲಿ ಸನ್ನಿಧಾನದಲ್ಲಿ ತೀರ್ಥಾಟಕರ ಸಂದಣಿ ನಿಯಂತ್ರಿಸಲು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇದರ ಅಂಗವಾಗಿ ಹೆಚ್ಚುವರಿಯಾಗಿ ೫೦೦ರಷ್ಟು ಪೊಲೀಸರನ್ನು ಶಬರಿಮಲೆ ಕರ್ತವ್ಯಕ್ಕಾಗಿ ನೇಮಿಸಲಾಗುವುದು. ಮಂಡಲ ಪೂಜೆ ವೇಳೆ ಶಬರಿಮಲೆಯಲ್ಲಿ ಮಾತ್ರವಾಗಿ ೨೭೦೦ರಷ್ಟು ಪೊಲೀಸರಿರುವರು. ಈಗ ಪೊಲೀಸ್, ಆರ್‌ಎಎಫ್, ಬಾಂಬುಸ್ಕ್ವಾಡ್, ಸಿಆರ್‌ಪಿಎಫ್, ಎನ್‌ಡಿಆರ್‌ಎಫ್‌ನಿಂದಾಗಿ ೨೧೫೦ ಮಂದಿ ಸನ್ನಿಧಾನ ಹಾಗೂ ಪರಿಸರ ಪ್ರದೇಶಗಳಲ್ಲಿ ಕರ್ತವ್ಯದಲ್ಲಿದ್ದಾರೆ. ಇದರ ಹೊರತು ಪಂಪಾ ಹಾಗೂ ನಿಲಯ್ಕಲ್‌ನಲ್ಲಿ ಕರ್ತವ್ಯನಿರತ ಪೊಲೀಸರು ಬೇರೆಯೇ ಇದ್ದಾರೆ.
