ಮಗಳ ಮೇಲೆ ಅತ್ಯಾಚಾರವೆಸಗಿ ಕೊಂದ ಪಾಪಿಯನ್ನು ಗುಂಡಿಕ್ಕಿ ಕೊಲೆಗೈದ ತಂದೆ ನಿಧನ

ಮಲಪ್ಪುರಂ: 13 ವರ್ಷ ಪ್ರಾಯದ ಮಗಳ ಮೇಲೆ ಅತ್ಯಾಚಾರವೆಸಗಿದ ಬಳಿಕ ಆಕೆಯನ್ನು ಕೊಂದ ಪ್ರಕರಣದ ಆರೋಪಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಅವಕಾಶ ನೀಡದೆ ಆತನನ್ನು ಗುಂಡಿಕ್ಕಿ ಕೊಲೆಗೈದ ಶಂಕರನಾರಾಯಣನ್ (70)   ನಿಧನಹೊಂದಿದ್ದಾರೆ.

‘ಮಗಳ ತಂದೆ’ ಎಂದೇ ವಿಶೇಷಣದಿಂದ ಕೇರಳದಲ್ಲಿ ಕರೆಯ ಲಾಗುತ್ತಿದ್ದ ಶಂಕರನಾರಾಯಣನ್ ಮಲಪ್ಪುರಂ ಮಂಜೇರಿ ಚಾರಂಗಾವ್ ಚೇನೋಟುಕುನ್ನು ಪೂವಂಚೇರಿ ತೆಕ್ಕೇ ವೀಟಿಲ್ ನಿವಾಸಿಯಾಗಿದ್ದಾರೆ.

ಶಂಕರನಾರಾಯಣನ್‌ರ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ ಪುತ್ರಿ 2001 ಫೆಬ್ರವರಿ 9ರಂದು ಶಾಲೆಬಿಟ್ಟು ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ  ನೆರೆಮನೆ ನಿವಾಸಿ ಮುಹಮ್ಮದ್ ಕೋಯಾ (24) ಎಂಬ ಕಾಮುಕನ ಅಟ್ಟಹಾಸಕ್ಕೆ ಆಗೆ ಬಲಿಯಾಗಿದ್ದಳು. ಆಗ ಆಕೆಗೆ ಇನ್ನೂ ಕೇವಲ 13 ವರ್ಷ ವಯಸ್ಸು. ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ ಬಳಿಕ  ಅತ್ಯಂತ ಕ್ರೂರವಾಗಿ ಕೊಲೆಗೈದಿದ್ದನು. ಈ ಸುದ್ದಿ  ಕೇರಳದಲ್ಲಿ ಕಾಳ್ಗಿಚ್ಚಿನಂತೆ ಹರಡಿತ್ತು.  ಮಾಧ್ಯಮಗಳು ಈ ಕೊಲೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದವು. ಮಗಳ ಅಗಲುವಿಕೆ ಶಂಕರ ನಾರಾಯಣನ್‌ರ ಜೀವನವನ್ನೇ ಕಣ್ಣೀರಿನಲ್ಲಿ ಮುಳುಗಿಸಿತ್ತು. ಮಾತ್ರವಲ್ಲದೆ ಮಗಳ ಹಂತಕನ ಮೇಲೆ ಸೇಡು ತೀರಿಸಲೂ ಅವರು ಕಾಯತೊಡಗಿದರು.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಮೊಹಮ್ಮದ್ ಕೋಯಾ 2002 ಜುಲೈ 27ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದನು.  ಹೀಗೆ ಆತ ಬಿಡುಗಡೆಗೊಂಡು ಜೈಲಿನಿಂದ ಹೊರಬರುತ್ತಿರುವಂತೆಯೇ  ಆತನನ್ನು ಶಂಕರನಾರಾಯಣನ್ ಗುಂಡಿಕ್ಕಿ ಕೊಲೆಗೈದಿದ್ದನು. ಆ ಮೂಲಕ ಮಗಳ ಹಂತಕನನ್ನು ಕೊಂದ  ಹೀರೋ ಎಂದೇ ಅವರು ರಾಜ್ಯದಲ್ಲಿ ಪ್ರಸಿದ್ಧಿ ಹೊಂದಿದ್ದರು.  ಆರೋಪಿಯ  ಕೊಲೆಗೆ   ಸಂಬಂಧಿಸಿದ ಪ್ರಕರಣದಲ್ಲಿ ಮಂಜೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಶಂಕರನಾರಾಯಣ ನ್‌ರಿಗೆ ಜೀವಾವಧಿ ಸಜೆ ವಿಧಿಸಿತ್ತು.  ಬಳಿಕ ಆ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯಲ್ಲಿ 2006ರಲ್ಲಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಹೈಕೋರ್ಟ್ ಶಂಕರನಾರಾಯಣನ್‌ರನ್ನು ಖುಲಾಸೆಗೊಳಿಸಿತ್ತು. ತನ್ನ ಕೊನೆಯ ಉಸಿರ ತನಕವೂ  ಶಂಕರ ನಾರಾಯಣನ್ ಸದಾ ಅಗಲಿದ   ಮುದ್ದಿನ ಮಗಳ ಬಗ್ಗೆಯೇ ಮಾತನಾಡುತ್ತಿದ್ದಾರೆಂದು ನೆರೆಮನೆಯವರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page