ಮಗುವಿಗೆ ಜನ್ಮ ನೀಡಿದ ಅಪ್ರಾಪ್ತ ಬಾಲಕಿ ಸಹೋದರಿಯ ಪತಿ ಪೋಕ್ಸೋ ಪ್ರಕಾರ ಸೆರೆ
ಕಾಸರಗೋಡು: ಪ್ರಾಯಪೂರ್ತಿಯಾಗದ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಬಾಲಕಿಯ ಸಹೋದರಿಯ ಪತಿಯನ್ನು ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ.
ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಗರ್ಭಿಣಿಯಾದ ವಿಷಯ ಮನೆಯವರ ಗಮನಕ್ಕೆ ಬಂದಿರಲಿಲ್ಲ. ಇತ್ತೀಚೆಗೆ ಹೊಟ್ಟೆ ನೋವು ಅನುಭವಗೊಂಡ ಹಿನ್ನೆಲೆಯಲ್ಲಿ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿತ್ತು. ಈ ವೇಳೆ ಬಾಲಕಿ ಗರ್ಭಿಣಿ ಎಂಬ ವಿಷಯ ತಿಳಿದುಬಂದಿದೆ. ಇದರಿಂದ ಬಾಲಕಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಕೂಡಲೇ ಹೆರಿಗೆಯೂ ನಡೆದಿದೆ. ಬಾಲಕಿಗೆ ಹದಿನೆಂಟು ವರ್ಷ ಪ್ರಾಯವೆಂದು ಸಂಬಂಧಿಕರು ವೈದ್ಯರಲ್ಲಿ ತಿಳಿಸಿದ್ದರು. ಆದರೆ ಬಾಲಕಿ ಕಿರುಕುಳಕ್ಕೊಳಗಾದ ಸಂದರ್ಭದಲ್ಲಿ ೧೭ ವರ್ಷವಾಗಿತ್ತು. ಬಾಲಕಿ ಗರ್ಭಿಣಿಯಾದ ವಿಷಯವನ್ನು ಆಸ್ಪತ್ರೆ ಅಧಿಕಾರಿಗಳು ವೆಳ್ಳರಿಕುಂಡ್ ಪೊಲೀಸರಿಗೆ ತಿಳಿಸಿದ್ದು, ಇದರಂತೆ ಬಾಲಕಿಯ ಸಹೋದರಿ ಪತಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಿ ಬಂಧಿಸಲಾಗಿದೆ.