ಮಧೂರು: ಸಾಧ್ವಿ ಶ್ರೀ ಮಾತಾನಂದಮಯಿಯವರಿಗೆ ಇಂದು ಪೂರ್ಣಕುಂಭ ಸ್ವಾಗತ
ಮಧೂರು: ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪಸೇವೆಯ ಅಂಗವಾಗಿ ಇಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮಗಳಾಗಿ ಶ್ರೀ ಧರ್ಮಶಾಸ್ತ, ದುರ್ಗಾ, ಸುಬ್ರಹ್ಮಣ್ಯ, ವೀರಭದ್ರ ಸನ್ನಿಧಿಯಲ್ಲಿ ಕಲಶಾಭಿಷೇಕ, ತತ್ವಹೋಮ, ತತ್ವಕಲಶಾಭಿಷೇಕ, ಚಂಡಿಕಾಯಾಗ ನಡೆಯಿತು. ಸಂಜೆ 5ರಿಂದ ಭದ್ರಕಮಂಡಲಪೂಜೆ, ಪಂಚ ವಿಂಶತಿ ದ್ರವ್ಯ ಮೀಳಿತ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಧಿವಾಸ, ನವಕುಂಡಗಳಲ್ಲಿ ಅಧಿವಾಸ ಹೋಮಗಳು, ಮಹಾಗಣಪತಿ ದೇವರಿಗೆ 109 ಕಲಶಪ್ರತಿಷ್ಠೆ, ಅಧಿವಾಸ ಹೋಮ ನಡೆಯಲಿರುವುದು. ಇಂದು ಬೆಳಿಗ್ಗೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನAನ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಕ್ಷೇತ್ರಕ್ಕೆ ಆಗಮಿಸಿದ್ದು, ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿದರು. ಹಲವರು ಗಣ್ಯರು ಉಪಸ್ಥಿತರಿದ್ದರು. ಮಧ್ಯಾಹ್ನ 12.30ಕ್ಕೆ ರಾಜನ್ ಮುಳಿಯಾರು ಅವರಿಂದ ಏಕಪಾತ್ರಾಭಿನಯ-ಸುಯೋಧನಂ, 1.30ಕ್ಕೆ ನಾರಾಯಣ ಜೋಗಿ ಮತ್ತು ಸುರೇಶ್ ಜೋಗಿ ಮಂಗಳೂರು ಇವರಿಂದ ಸ್ಯಾಕ್ಸೋಫೋನ್, ಅಪರಾಹ್ನ 3ಕ್ಕೆ ಗಂಗಾಧರ ಗಾಂಧಿ ಮಂಗಳೂರು ಇವರಿಂದ ಗೀತಾಗಾಯನ, 4 ಗಂಟೆಗೆ ಉಡುಪಿ ಕಾಣಿಯಾರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. 4.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 7ಕ್ಕೆ ನಾಟ್ಯನಿಕೇತನ ಕೊಯಂಬತ್ತೂರು ಇವರಿಂದ ನೃತ್ಯ ನಾಟಕ, 9ಕ್ಕೆ ಶ್ವೇತಾ ನಾಗೇಶ್ ಚೆನ್ನೈ ಇವರಿಂದ ಕೂಚುಪ್ಪುಡಿ, 10ಕ್ಕೆ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಇವರಿಂದ ನೃತ್ಯ ರಂಜಿನಿ ನಡೆಯಲಿದೆ. ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ವಿವಿಧ ವೈದಿಕ, ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ಎಪ್ರಿಲ್ 7ರ ವರೆಗೆ ನಡೆಯಲಿದೆ.