ಮನೆಗಳಿಗೆ ನುಗ್ಗಿ ಕಳವು ನಡೆಸುತ್ತಿದ್ದ ಕುಖ್ಯಾತ ಆರೋಪಿ ಕಾಸರಗೋಡಿನಲ್ಲಿ ಸೆರೆ

ಕಾಸರಗೋಡು: ಕುಖ್ಯಾತ ಕಳವು ಆರೋಪಿಯಾದ ಉಡುಂಬು ರಮೇಶನ್ (36) ಎಂಬಾತ ಕಾಸರ ಗೋಡಿನಲ್ಲಿ ಸೆರೆಗೀಡಾಗಿದ್ದಾನೆ. ಕಾಸರಗೋಡು ನಗರ ಠಾಣೆ ಎಸ್‌ಐ ಅಖಿಲ್ ನೇತೃತ್ವದಲ್ಲಿ ಪಾಲಕ್ಕಾಡ್ ಪೊಲೀಸರ ಸಹಾಯದೊಂದಿಗೆ ಈತ ನನ್ನು ಬಂಧಿಸಲಾಗಿದೆ. ಪಾಲಕ್ಕಾಡ್ ಪರಳಿ ಮುತ್ತನ್‌ತರವಾಳಯಂ ಅಂಜಾ ಮೈಲ್ ಎಡತ್ತರ ಎಂಬಲ್ಲಿನ ನಿವಾಸಿ ಯಾದ ಉಡುಂಬು ರಮೇಶನ್ ಯಾನೆ ರಮೇಶನ್ ಕಾಸರಗೋಡು ಬೀರಂತ ಬೈಲ್‌ನಲ್ಲಿ ಆರ್. ಲಕ್ಷ್ಮೀನಾರಾಯಣ ನಾಕ್ ಎಂಬವರ ಮನೆಯ ಬಾಗಿಲು ಮುರಿದು ಒಳನುಗ್ಗಿ 2000 ರೂಪಾಯಿ ಕಳವು ನಡೆಸಿದ್ದನು.

ಎಪ್ರಿಲ್ 18ರಂದು  ಕಳವು ನಡೆದಿತ್ತು. ಲಕ್ಷ್ಮೀನಾರಾಯಣ ನಾಕ್ ಹಾಗೂ ಕುಟುಂಬ ಬೆಂಗಳೂರಿನಲ್ಲಿರುವ ಮಗನ ಮನೆಗೆ ಹೋದ ಸಮಯದಲ್ಲಿ ಈ ಕಳವು ನಡೆದಿದೆ. ಬೇರೊಂದು ಪ್ರಕರಣದಲ್ಲಿ ಸೆರೆಗೀಡಾಗಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡ ರಮೇಶನ್ ನೇರವಾಗಿ ಕಾಸರಗೋಡಿಗೆ ತಲುಪಿದ್ದನು. ಕೆಲಸ ಹುಡುಕುವ ನೆಪದಲ್ಲಿ ಕಾಸರಗೋಡಿಗೆ ಬಂದಿರುವ ಈತ ಇಲ್ಲಿ ಕಳವಿಗೆ ಯೋಜನೆ ಹಾಕಿದ್ದನು. ಕೇರಳ ಹಾಗೂ ಕರ್ನಾಟಕದಲ್ಲಾಗಿ 100ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ. ಕರ್ನಾಟಕದ ಕೊಡಗು ಜಿಲ್ಲೆಯ ಅಮ್ಮತ್ತಿ ಎಂಬಲ್ಲಿ ರಮೇಶನ್ ಜನಿಸಿದ್ದನು. ತಂದೆ, ತಾಯಿ ತೋಟ ಕಾರ್ಮಿಕರಾಗಿದ್ದಾರೆ.

ರಮೇಶನ್‌ನ ತಂದೆ ಪಾಲಕ್ಕಾಡ್ ನಿವಾಸಿಯಾಗಿದ್ದಾರೆ. 5ನೇ ತರಗತಿ ವರೆಗೆ ಕೊಡಗಿನ ಒಂದು ಶಾಲೆಯಲ್ಲಿ ಶಿಕ್ಷಣ ಪೂರೈಸಿದ ರಮೇಶನ್ ಬಳಿಕ ತಂದೆಯ ಊರಿಗೆ ತಲುಪಿದ್ದನು. ಪಾಲಕ್ಕಾಡ್‌ನಲ್ಲಿ ಸಂಬಂಧಿಕೆಯೊಬ್ಬರ ಮನೆಯಲ್ಲಿ ವಾಸಿ ಸುತ್ತಿದ್ದನು. ಈ ಮಧ್ಯೆ ಸಂಬಂಧಿಕೆಯ ಪರ್ಸ್‌ನಿಂದ 300 ರೂಪಾಯಿ ಕಳವು ಗೈದು ತನ್ನ ಈ ಕೃತ್ಯವನ್ನು ಆರಂಭಿಸಿದ್ದನು. ಅನಂತರ ಹಲವು ಕಳ್ಳರೊಂದಿಗೆ ಪರಿಚಯಗೊಂಡು ಅವರಿಂದ ಇನ್ನಷ್ಟು ಕಳವು ಕೃತ್ಯದ ಕುರಿತು ಕಲಿತುಕೊಂಡಿದ್ದ ನೆನ್ನಲಾಗಿದೆ. ಮುಚ್ಚುಗಡೆಗೊಳಿಸಿದ ಯಾವುದೇ ಮನೆಗೂ ನುಗ್ಗಿ ಕಳವು ನಡೆಸುವ ಕುರಿತು ತಿಳಿದುಕೊಂಡಿರುವ ರಮೇಶನ್ ಆ ಮೂಲಕ ಉಡುಂಬು ರಮೇಶನ್ ಎಂದು ಕರೆಯಲ್ಪಟ್ಟನು.

Leave a Reply

Your email address will not be published. Required fields are marked *

You cannot copy content of this page