ಮನೆಗೆ ನುಗ್ಗಿದ ಕಳ್ಳರು ಯುವಕನಿಗೆ ಕೋವಿ ತೋರಿಸಿ ಬೆದರಿಕೆಯೊಡ್ಡಿ ಹಲ್ಲೆಗೈದು ಪರಾರಿ

ಉಪ್ಪಳ: ಮನೆಗೆ ಬೀಗ ಜಡಿದು ಕುಟುಂಬ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ   ಆಯುಧಧಾರಿಗಳಾದ ಕಳ್ಳರು ಮನೆಗೆ ನುಗ್ಗಿ ಹಣ ಹಾಗೂ ಚಿನ್ನಾಭರಣ ಕಳವು ನಡೆಸಿದ ಘಟನೆ ನಡೆದಿದೆ. ಇದೇ ವೇಳೆ ಮನೆಗೆ ಕಳ್ಳರು ನುಗ್ಗಿದ ವಿಷಯ ತಿಳಿದು ಅಲ್ಲಿಗೆ ತಲುಪಿದ ಯುವಕನ ಮೇಲೆ ಕಳ್ಳರ ತಂಡ ಹಲ್ಲೆಗೈದು  ಕೋವಿ ತೋರಿಸಿ ಬೆದರಿಕೆಯೊಡ್ಡಿ ಪರಾರಿಯಾಗಿದೆ.   

ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಗಲ್ಫ್ ಉದ್ಯೋಗಿಯಾದ ಬದ್ರುಲ್ ಮುನೀರ್ ಎಂಬವರ ಮನೆಯಲ್ಲಿ ನಿನ್ನೆ ರಾತ್ರಿ ೭ ಗಂಟೆ ವೇಳೆ  ಕಳವು ನಡೆದಿದೆ. ಮನೆಯಿಂದ ನಾಲ್ಕು ಪವನ್ ಚಿನ್ನಾಭರಣ ಹಾಗೂ ೩೫೦೦೦ ರೂಪಾಯಿ ಕಳವಿಗೀಡಾಗಿರುವುದಾಗಿ ತಿಳಿಸಲಾಗಿದೆ. 

ಮನೆ ಮಾಲಕ ಬದ್ರುಲ್ ಮುನೀರ್ ಗಲ್ಫ್‌ನಲ್ಲಿದ್ದಾರೆ. ಮನೆಯಲ್ಲಿ  ಪತ್ನಿ ಖದೀಜತ್ ರೆಹ್ನಾಸ್ ಹಾಗೂ ಇಬ್ಬರು  ಮಕ್ಕಳು ಮಾತ್ರವೇ ಇದ್ದಾರೆ. ಖದೀಜತ್ ರೆಹ್ನಾಸ್‌ರ ತಂದೆ ಉಪ್ಪಳದಲ್ಲಿ ಬಟ್ಟೆ ಅಂಗಡಿ ಮಾಲಕರಾದ ಮೆಹಮೂದ್‌ರ ಮನೆ ಅಲ್ಪವೇ ದೂರದಲ್ಲಿದ್ದು, ಇದರಿಂದ ಖದೀಜತ್ ರೆಹ್ನಾಸ್ ಮಕ್ಕಳೊಂದಿಗೆ ಸಂಜೆ ವೇಳೆ ಅಲ್ಲಿಗೆ ತೆರಳಿ ಬೆಳಿಗ್ಗೆ ಮನೆಗೆ ಮರಳುತ್ತಿದ್ದಾರೆ. ಎಂದಿನಂತೆ ನಿನ್ನೆ ಸಂಜೆಯೂ ಇವರು ಮಕ್ಕಳೊಂದಿಗೆ ಅಲ್ಲಿಗೆ ತೆರಳಿದ್ದರು.  ರಾತ್ರಿ ೭ ಗಂಟೆ ವೇಳೆ ಉಪ್ಪಳದ ಬಟ್ಟೆ ಅಂಗಡಿಯಿಂದ ಖದೀಜತ್ ರೆಹ್ನಾಸ್‌ರ ಸಹೋದರ  ಮೊಹಮ್ಮದ್ ರಮೀಸ್ ತನ್ನ ಮನೆಗೆ ತೆರಳಿದ್ದು ಈ ವೇಳೆ ಸಹೋದರಿಯ ಮನೆ ಬಳಿ ಎರಡು ಬೈಕ್‌ಗಳು ನಿಂತಿರುವುದು ಕಂಡುಬಂದಿತ್ತು. ಕೂಡಲೇ ತನ್ನ ಮನೆಗೆ ತೆರಳಿದ ಮೊಹಮ್ಮದ್ ರಮೀಸ್ ಮರಳಿ ಸಹೋದರಿಯ ಮನೆಗೆ ತಲುಪಿದ್ದಾರೆ. ಈ ವೇಳೆ ಮನೆಯೊಳಗಿಂದ ಸದ್ದು ಕೇಳಿ ಬಂದಿದ್ದು, ಇದರಿಂದ   ಗೇಟ್ ಅಲುಗಾಡಿಸಿ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಮನೆಯೊಳಗಿಂದ ಇಬ್ಬರು ಕಳ್ಳರು ಓಡಿ ಬಂದು ಮೊಹಮ್ಮದ್ ರಮೀಸ್‌ರ ಮೇಲೆ ಹಲ್ಲೆಗೈದಿದ್ದಾರೆ. ಅಷ್ಟರಲ್ಲಿ  ಮತ್ತೆ ನಾಲ್ಕು ಮಂದಿ ಮನೆಯೊಳಗಿಂದ ಕಬ್ಬಿಣದ ಸರಳುಗಳ ಸಹಿತ ತಲುಪಿ ಮೊಹಮ್ಮದ್ ರಮೀಸ್‌ರ ಮೇಲೆ ಹಲ್ಲೆಗೈದು ಕೋವಿ ತೋರಿಸಿ ಬೆದರಿಕೆಯೊಡ್ಡಿದ್ದಾರೆ.  ಬೊಬ್ಬೆ ಕೇಳಿ ಸ್ಥಳೀಯರು ಅಲ್ಲಿಗೆ ತಲುಪುತ್ತಿದ್ದಂತೆ ಕಳ್ಳರು   ಎರಡು ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ. ಸ್ಥಳೀಯರು ಕಳ್ಳರನ್ನು ಹಿಂಬಾಲಿಸಿದರೂ ಪತ್ತೆಹಚ್ಚಲಾ ಗಲಿಲ್ಲ. ಸೋಂಕಾಲ್ ರಸ್ತೆಯಾಗಿ ಕೈಕಂಬ ಭಾಗಕ್ಕೆ ಕಳ್ಳರು ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ. ಭಾರೀ ದರೋಡೆ ತಂಡವೇ ಈ ಮನೆ ಕಳವು ನಡೆಸಲು ತಲುಪಿದೆ ಯೆಂದು  ಅಂದಾಜಿಸಲಾಗಿದೆ. ಮನೆಯ ಸಿಸಿ ಟಿವಿಯ ಹಾರ್ಡ್ ಡಿಸ್ಕ್‌ನ್ನು ಕಳ್ಳರು ಕೊಂಡೊಯ್ದಿದ್ದಾರೆ. ಟಿವಿಯನ್ನ್ಲು ಕೊಂಡೊಯ್ಯಲು  ತೆಗೆದಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನೆ ಬಗ್ಗೆ ಮೆಹಮೂದ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದಾರೆ. 

Leave a Reply

Your email address will not be published. Required fields are marked *

You cannot copy content of this page