ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕರ ಬಾಲಕಿ ಕುಸಿದು ಬಿದ್ದು ಮೃತ್ಯು
ಉಪ್ಪಳ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಧ್ಯೆ ಅಪಸ್ಮಾರ ರೋಗದಿಂದಾಗಿ ಕುಸಿದು ಬಿದ್ದ ಬಾಲಕಿ ಮೃತಪಟ್ಟಳು. ಬಾಯಾರು ಬಳಿಯ ಧರ್ಮತ್ತಡ್ಕ ಕಕ್ವೆ ನಿವಾಸಿ ರಮೇಶ್‌ರ ಪುತ್ರಿ ನಿಶಾ (5) ಮೃತಪಟ್ಟ ಬಾಲಕಿ. ನಿನ್ನೆ ಬೆಳಿಗ್ಗೆ ಈಕೆ ಮನೆಯಂಗಳದಲ್ಲಿ ಆಟವಾಡುತ್ತಿದ್ದಳು.
ಈ ವೇಳೆ ಕುಸಿದು ಬಿದ್ದಿದ್ದು, ಕೂಡಲೇ ಕುಂಬಳೆಯ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ವಿದ್ಯಾನಗರದ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆ ವೇಳೆಗೆ ಬಾಲಕಿ ಮೃತಪಟ್ಟಿದ್ದಳು. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಬೇಬಿ ಬಾಲಕಿಯ ತಾಯಿಯಾಗಿದ್ದು, ಸಹೋದರಿ ದಿಶಾಳನ್ನು ಅಗಲಿದ್ದಾಳೆ.