ಮಲಬಾರ್ ಅಭಿವೃದ್ಧಿ ಯೋಜನೆ: ಕೇಂದ್ರ ಸಚಿವ ಗಡ್ಕರಿಯಿಂದ ೫ರಂದು ಕಾಸರಗೋಡಿನಲ್ಲಿ ವಿದ್ಯುಕ್ತ ಘೋಷಣೆ
ಕಾಸರಗೋಡು: ಉತ್ತರ ಕೇರಳದ ಸರ್ವಾಂಗೀಣ ಅಭಿವೃದ್ಧಿ ಕೇಂದ್ರ ಸರಕಾರ ರೂಪು ನೀಡಿರುವ ಮಲಬಾರ್ ಅಭಿವೃದ್ಧಿ ಯೋಜನೆಯನ್ನು ಕೇಂದ್ರ ಭೂ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಜನವರಿ ೫ರಂದು ಕಾಸರಗೋಡಿನಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ವಿದ್ಯುಕ್ತವಾಗಿ ಘೋಷಿಸುವರು.
ಅಂದು ಬೆಳಿಗ್ಗೆ ೧೦.೩೦ಕ್ಕೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವರುಗಲಾದ ಆರ್.ಪಿ.ಸಿಂಗ್, ವಿ. ಮುರಳೀಧರನ್, ರಾಜ್ಯ ಲೋಕೋಪಯೋಗಿ-ಪ್ರವಾಸೋದ್ಯಮ ಖಾತೆ ಸಚಿವ ಮೊಹಮ್ಮದ್ ರಿಯಾಸ್ ಸೇರಿದಂತೆ ಹಲವರು ಭಾಗವಹಿಸುವರು. ಮಾತ್ರವಲ್ಲ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕೂಡಾ ಇದರಲ್ಲಿ ಭಾಗವಹಿಸುವ ಸಾಧ್ಯತೆಯೂ ಇದೆ.
ಕಾರ್ಯಕ್ರಮ ನಡೆಯಲಿರುವ ತಾಳಿಪಡ್ಪು ಮೈದಾನದಲ್ಲಿ ವೇದಿಕೆ ಮತ್ತು ಚಪ್ಪರ ನಿರ್ಮಾಣ ಕೆಲಸ ಈಗಾಗಲೇ ಆರಂಭಗೊಂಡಿದೆ. ಆದರೆ ಮಲಬಾರ್ ಅಭಿವೃದ್ಧಿ ಯೋಜನೆಯಲ್ಲಿ ಕಾಸರಗೋಡು ಸೇರಿದಂತೆ ಉತ್ತರ ಕೇರಳದಲ್ಲಿ ಯಾವುದೆಲ್ಲ್ಲಾ ಯೋಜನೆಗಳನ್ನು ಒಳಪಡಿಸಲಾಗಿದೆ ಎಂಬುವುದನ್ನು ಕೇಂದ್ರ ಸರಕಾರ ಈತನಕ ಬಹಿರಂಗಪಡಿಸಿಲ್ಲ. ಅದನ್ನು ಕಾರ್ಯಕ್ರಮದಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಖುದ್ದಾಗಿ ಪ್ರಕಟಿಸುವರು. ಕೆಲವೊಮ್ಮೆ ಇದರಲ್ಲಿ ಕಾಸರಗೋಡಿಗೆ ಕೆಲವು ಅಚ್ಚರಿಯ ಕೊಡುಗೆಗಳು ಒಳಗೊಳವ ಸಾಧ್ಯತೆಯನ್ನೂ ನಿರೀಕ್ಷಿಸಲಾಗುತ್ತಿದೆ. ಲೋಕಸಭಾ ಚುನಾವಣೆ ಇನ್ನೇನು ಎಪ್ರಿಲ್ನೊಳಗಾಗಿ ನಡೆಯಲಿದ್ದು, ಅದನ್ನು ಮುಂದಕ್ಕೆ ಕಂಡುಕೊಂಡು ಕೇಂದ್ರ ಸಚಿವರಿಂದ ಅಚ್ಚರಿಯ ಘೋಷಣೆ ಉಂಟಾಗುವ ಸಾಧ್ಯತೆಯೂ ಇದೆ. ಕಾರ್ಯಕ್ರಮ ನಡೆಯುವ ದಿನದಂದು ಕಾಸರಗೋಡಿನಲ್ಲಿ ಅತ್ಯಂತ ಬಿಗು ಭದ್ರತೆಯನ್ನು ಏರ್ಪಡಿಸುವ ಕೆಲಸದಲ್ಲಿ ಪೊಲೀಸರು ಈಗಾಗಲೇ ತೊಡಗಿದ್ದಾರೆ.
ಕಾಸರಗೋಡಿನಲ್ಲಿ ನಡೆಯುವ ಕಾರ್ಯಕ್ರಮದ ಬಳಿಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಡುಕ್ಕಿ ಜಿಲ್ಲೆಯ ಮೂನ್ನಾರಿಗೂ ಸಾಗಿ ಅಲ್ಲ್ಲೂ ಹಲವು ಮಹತ್ತರ ಅಭಿವೃದ್ಧಿಯ ಯೋಜನೆಗಳ ಘೋಷಣೆ ನಡೆಸಲಿದ್ದಾರೆ.