ಮಲ್ಲಂಪಾರೆಯಲ್ಲಿ ಚಿರತೆ ಸಾವಿಗೆ ಕಾರಣವಾದ ಕುಣಿಕೆ ಇರಿಸಿದವರಿಗಾಗಿ ಶೋಧ

ಅಡೂರು: ಬಂದಡ್ಕ ಫಾರೆಸ್ಟ್ ಸೆಕ್ಷನ್ ವ್ಯಾಪ್ತಿಯ ಪಾಂಡಿ ಮಲ್ಲಂಪಾರೆಯಲ್ಲಿ ಕಾಡು ಹಂದಿಗೆ ಇರಿಸಿದ ಕುಣಿಕೆಯಲ್ಲಿ ಸಿಲುಕಿ ಚಿರತೆ ಸಾವಿಗೀಡಾದ ಘಟನೆಯ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ಕುಣಿಕೆ ಇರಿಸಿದವರು ಯಾರು ಎಂದು ಪತ್ತೆಹಚ್ಚಲು ತನಿಖೆ ಮುಂದುವರಿಯತ್ತಿದೆ. ತನಿಖೆಯಂಗವಾಗಿ ಹಲವರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಕಳೆದ ಶುಕ್ರವಾರ ಬೆಳಿಗ್ಗೆ ಮಲ್ಲಂಪಾರೆಯ ರಬ್ಬರ್ ತೋಟವೊಂದರಲ್ಲಿ ಚಿರತೆ ಕುಣಿಕೆಯಲ್ಲಿ ಸಿಲುಕಿರುವುದು ಕಂಡು ಬಂದಿತ್ತು. ಮಧ್ಯಾಹ್ನ ವೇಳೆ ಅದು ಸಾವಿಗೀಡಾಗಿದೆ. ಆಂತರಿಕ ಅವಯವಗಳಿಗೆ ಉಂಟಾದ ಗಂಭೀರ ಗಾಯವೇ ಚಿರತೆ ಸಾವಿಗೀಡಾಗಲು ಕಾರಣವೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಮೂರು ಮೀಟರ್ ಉದ್ದದ ಮರದ ತುಂಡಿನಲ್ಲಿ ಕಬ್ಬಿಣದ ಸರಿಗೆ ಉಪಯೋಗಿಸಿ ಇರಿಸಿದ ಕುಣಿಕೆಯಲ್ಲಿ ಚಿರತೆ ಸಿಲುಕಿಕೊಂಡಿತ್ತು. ಭತ್ತದ ಗದ್ದೆ ಸಮೀಪದಿಂದ ಚಿರತೆ ಈ ಕುಣಿಕೆಯಲ್ಲಿ ಸಿಲುಕಿದೆ ಎಂದೂ, ಅಲ್ಲಿಂದ 50 ಮೀಟರ್‌ನಷ್ಟು ದೂರಕ್ಕೆ ಮರದ ತುಂಡನ್ನು ಎಳೆದುಕೊಂಡೊಯ್ದು ರಬ್ಬರ್ ತೋಟಕ್ಕೆ ತಲುಪಿರುವುದಾಗಿಯೂ, ಅಲ್ಲಿ ಅದು ಸಿಲುಕಿಕೊಂಡಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ಮಾಹಿತಿಗಳು ಶೀಘ್ರ ಲಭಿಸಲಿದೆ ಎಂಬ ಸೂಚನೆಯನ್ನು ಅರಣ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

RELATED NEWS

You cannot copy contents of this page