ಮಹಿಳೆಯ ಕೊಂದ ಹುಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ವಯನಾಡು: ಮಾನಂತವಾಡಿಯ ಪಂಜಾರಕೊಲ್ಲಿ ಎಂಬಲ್ಲಿ ನರಭಕ್ಷಕ ಹುಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. 48 ಗಂಟೆ ಕಾಲ ನಿಷೇಧಾಜ್ಞೆ ಘೋಷಿಸಿ ಅರಣ್ಯಾಧಿಕಾರಿಗಳ ತಂಡ ಕಾಡಿನಲ್ಲಿ ಶೋಧ ನಡೆಸುತ್ತಿದ್ದ ವೇಳೆ ಇಂದು ಮುಂಜಾನೆ 2.30 ರ ವೇಳೆ ಹುಲಿ ಸಾವಿಗೀಡಾಗಿರುವುದಾಗಿ ಕಂಡು ಬಂದಿದೆ. ಸಾವಿಗೀಡಾಗಿರುವುದು ಇತ್ತೀಚೆಗೆ ಪಂಜಾರಕೊಲ್ಲಿಯ ಕಾಫಿ ತೋಟಕ್ಕೆ ಕೆಲಸಕ್ಕೆ ಹೋದ ರಾಧಾ (46) ಎಂಬ ಮಹಿಳೆಯನ್ನು ಕೊಂದ ಹುಲಿಯೇ ಆಗಿದೆಯೆಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಹುಲಿಯ ದೇಹದಲ್ಲಿ ಗಾಯಗಳು ಕಂಡು ಬಂದಿವೆ. ಅರಣ್ಯಾಧಿಕಾರಿಗಳು ಹಾರಿಸಿದ ಗುಂಡು ತಗಲಿ ಹುಲಿ ಸಾವಿಗೀಡಾಗಿದೆಯೇ ಎಂದು ಮರಣೋತ್ತರ ಪರೀಕ್ಷೆ ಮೂಲಕ ಮಾತ್ರವೇ ತಿಳಿಯಬಹುದಾಗಿದೆ. ನಿನ್ನೆ ಆರ್‌ಆರ್ಟಿ ತಂಡದ ಸದಸ್ಯನಾದ ಜಯಸೂರ್ಯ ಎಂಬವರ ಮೇಲೆ ಹುಲಿ ದಾಳಿ ನಡೆಸಿತ್ತು. ಈ ವೇಳೆ ಆರ್‌ಆರ್‌ಟಿ ತಂಡ ಗುಂಡು ಹಾರಿಸಿತ್ತು. ಆದರೆ ಗುಂಡು ಹುಲಿಗೆ ತಾಗಿಲ್ಲವೆಂದೂ ಅಂದಾಜಿಸಲಾಗಿತ್ತು.
ಇತ್ತೀಚೆಗೆ ಪಂಜಾರಕೊಲ್ಲಿ ಎಂಬಲ್ಲಿ ರಾಧಾ ಎಂಬವರನ್ನು ಹುಲಿ ಕೊಂದ ಹಿನ್ನೆಲೆಯಲ್ಲಿ ನಾಗರಿಕರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹುಲಿಯನ್ನು ಗುಂಡಿಕ್ಕಿ ಕೊಲ್ಲುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಆರಂಭಿಸಿತ್ತು.