ಮೀನು ಹಿಡಿಯುತ್ತಿದ್ದ ವೇಳೆ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಕುಂಬಳೆ: ಸಮುದ್ರದಲ್ಲಿ ಬಲೆ ಉಪಯೋಗಿಸಿ ಮೀನು ಹಿಡಿಯುತ್ತಿದ್ದ ವೇಳೆ ಅಲೆಗಳಿಗೆ ಸಿಲುಕಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆಯಾಗಿದೆ. ಪೆರುವಾಡ್ ಕಡಪ್ಪುರ ಫಿಶರೀಸ್ ಕಾಲನಿಯ ಅಬ್ದುಲ್ಲರ ಪುತ್ರ ಅರ್ಶಾದ್ (19)ರ ಮೃತದೇಹ ನಿನ್ನೆ ಮಧ್ಯಾಹ್ನ ಕುಂಬಳೆ ಅಳಿವೆಬಾಗಿಲಿನಲ್ಲಿ ಮೀನುಕಾರ್ಮಿಕರಿಗೆ ಕಂಡುಬಂದಿದೆ. ಕೂಡಲೇ ಅದನ್ನು ಮೀನುಕಾರ್ಮಿಕರು ದಡಕ್ಕೆ ತಲುಪಿಸಿದರು.

ಮೊನ್ನೆ ಸಂಜೆ ೬ ಗಂಟೆಗೆ ಬಲೆ ಬೀಸಿ ಮೀನು ಹಿಡಿಯುತ್ತಿದ್ದಾಗ ಅರ್ಶಾದ್ ಅಲೆಗಳಿಗೆ ಸಿಲುಕಿ ನಾಪತ್ತೆಯಾಗಿದ್ದರು. ಈ ಬಗ್ಗೆ ಲಭಿಸಿದ ಮಾಹಿತಿಯಂತೆ ಮೀನುಕಾರ್ಮಿಕರು ಅಗ್ನಿಶಾಮಕದಳ, ಕರಾವಳಿ ಪೊಲೀಸ್, ಕುಂಬಳೆ ಪೊಲೀಸರು ಸೇರಿ ಶೋಧ ನಡೆಸಿದ್ದರು. ನಿನ್ನೆಯೂ ಹುಡುಕಾಟ ನಡೆಸುತ್ತಿದ್ದಂತೆ ಮೃತದೇಹ ಪತ್ತೆಯಾಗಿದೆ.

ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮನೆಗೆ ತಲುಪಿಸಿ, ಅನಂತರ  ಪೆರುವಾಡ್ ಕಡಪ್ಪುರ ಬದ್ರಿಯ ಜುಮಾ ಮಸೀದಿಯ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ಭಾರೀ ಸಂಖ್ಯೆಯಲ್ಲಿ ಜನರು ತಲುಪಿದ್ದರು. ಮೃತರು ತಂದೆ, ತಾಯಿ ಫಾತಿಮ, ಸಹೋದರಿ ಅರ್ಶಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತ ಅರ್ಶಾದ್ ಫುಟ್ಬಾಲ್ ಆಟಗಾರನೂ ಆಗಿದ್ದರು. ಇವರ ಅಕಾಲಿಕ ನಿಧನದಿಂದ ನಾಡಿನಲ್ಲಿ ಶೋಕ ಸಾಗರ ಸೃಷ್ಟಿಯಾಗಿದೆ.

You cannot copy contents of this page