ಮುಂಡಕೈ- ಚೂರಲ್ಮಲ ಪ್ರಕೃತಿ ವಿಕೋಪವನ್ನು ಅತಿ ತೀವ್ರ ದುರಂತವೆಂದು ಘೋಷಿಸಿದ ಕೇಂದ್ರ
ವಯನಾಡು: ಮುಂಡಕೈ- ಚೂರಲ್ಮಲ ಪ್ರಕೃತಿ ವಿಕೋಪವನ್ನು ಅತಿ ತೀವ್ರ ದುರಂತವಾಗಿ ಕೇಂದ್ರ ಸರಕಾರ ಘೋಷಿಸಿದೆ. ದುರಂತ ಸಂಭವಿಸಿದ ಅಂದಿನಿಂದ ಈ ಬೇಡಿಕೆಯನ್ನು ರಾಜ್ಯ ಸರಕಾರ ಮುಂದಿಟ್ಟಿತ್ತು. ಆದರೆ ಈಗ ಐದು ತಿಂಗಳು ಕಳೆದ ಬಳಿಕ ಕೇಂದ್ರ ಈ ಘೋಷಣೆ ಮಾಡಿದೆ. ಕೇಂದ್ರ ತಂಡ ನಡೆಸಿದ ತಪಾಸಣೆಯ ಆಧಾರದಲ್ಲಿ ಈಗ ಅತಿ ತೀವ್ರ ದುರಂತವೆಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ದುರಂತ ನಿವಾರಣಾ ಚಟುವಟಿಕೆಗಳಿಗಾಗಿ ಎಸ್.ಡಿ.ಆರ್.ಎಫ್‌ಗೆ ಹಣ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರವಾನಿಸಿದ ಪತ್ರದಲ್ಲಿ ತಿಳಿಸಲಾಗಿದೆ. ಕೇಂದ್ರದ ಗೃಹ ಸಚಿವಾಲಯದ ಜೋಯಿಂಟ್ ಸೆಕ್ರೆಟರಿ ಡಾ. ರಾಜೇಶ್ ಗುಪ್ತ ರಾಜ್ಯ ಕಂದಾಯ ಪ್ರಿನ್ಸಿಪಲ್ ಸೆಕ್ರೆಟರಿ ಟಿಂಕು ಬಿಸ್ವಾಳ್‌ರಿಗೆ ಈ ವಿಷಯ ಸೂಚಿಸಿ ಪತ್ರ ರವಾನಿಸಲಾಗಿದೆ. ಇದರಿಂದಾಗಿ ಆರ್ಥಿಕ ಸಹಾಯ ಇದಕ್ಕೆ ಹೊಂದಿಕೊಂಡು ರಾಜ್ಯಕ್ಕೆ ಲಭಿಸಲಿದೆ. ಆದರೆ ಪ್ರತ್ಯೇಕ ಧನಸಹಾಯ ಪ್ಯಾಕೇಜ್ ಮಂಜೂರು ಮಾಡುವ ಬಗ್ಗೆ ಕೇಂದ್ರದ ನಿಲುವಿನಲ್ಲಿ ಈಗಲೂ ಅಸ್ಪಷ್ಟತೆ ಇದೆ.
ಜುಲೈ ೩೦ರಂದು ಮುಂಡಕೈ- ಚೂರಲ್ಮಲದಲ್ಲಿ ಗುಡ್ಡೆ ಕುಸಿತ ಸಂಭವಿಸಿತ್ತು. ಅಂದಿನಿಂದಲೇ ಇದನ್ನು ರಾಷ್ಟ್ರೀಯ ದುರಂತವಾಗಿ ಘೋಷಿಸಬೇಕೆಂದು ಕೇರಳ ಆಗ್ರಹಿಸಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ದುರಂತ ಸ್ಥಳ ಸಂದರ್ಶಿಸಿದರೂ ಸಹಾಯ ಮಂಜೂರು ಮಾಡುವುದಕ್ಕೆ, ಅತಿ ತೀವ್ರ ದುರಂತವೆಂದು ಘೋಷಿಸುವುದಕ್ಕೆ ಕ್ರಮ ಉಂಟಾಗದಿರುವುದು ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು. ಈಗ ಈ ಘೋಷಣೆ ಕೇಂದ್ರದಿಂದ ಉಂಟಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಹೆಚ್ಚು ಸಹಾಯ ಆಗ್ರಹಿಸಲು ರಾಜ್ಯ ಸರಕಾರಕ್ಕೆ ಸಾಧ್ಯವಿದೆ. ಆದರೆ ಮೊತ್ತ ಮಂಜೂರು ಮಾಡುವ ಬಗ್ಗೆ ಕೇಂದ್ರ ನೀಡಿದ ಪತ್ರದಲ್ಲಿ ಸ್ಪಷ್ಟಪಡಿಸಲಾಗಿಲ್ಲ ಎನ್ನಲಾಗಿದೆ.