ಮುಂದುವರಿಯುತ್ತಿರುವ ಚಿರತೆ ಭೀತಿ: ಮನೆ ಅಂಗಳದಿಂದ ನಾಯಿಯನ್ನು ಕಚ್ಚಿ ಸಾಗಿಸಲೆತ್ನಿಸಿದ ಚಿರತೆ

ಮುಳ್ಳೇರಿಯ: ಕಾರಡ್ಕ ಪಂಚಾಯತ್‌ನ ವ್ಯಾಪ್ತಿಯಲ್ಲಿ ಚಿರತೆಗಳ ಕಾಟ ಇನ್ನೂ ಮುಂದುವರಿಯುತ್ತಿದ್ದು, ಕೊಟ್ಟಂಗುಳ ಮನೆ ಅಂಗಳಕ್ಕೆ ಚಿರತೆ ಬಂದು ಅಲ್ಲಿನ ಸಾಕು ನಾಯಿಯನ್ನು ಹಿಡಿಯಲು ಯತ್ನ ನಡೆಸಿದೆ.

ಕೊಟ್ಟಂಗುಳಿ ಒಯಕ್ಕಾಲಿನ ಎನ್.ಕೆ. ವಿನೋದ್‌ರ ಮನೆ ನಾಯಿಯನ್ನು ಮುಂಜಾನೆ ಚಿರತೆ ಹಿಡಿಯಲೆತ್ನಿಸಿದ್ದು, ಆಗ ನಾಯಿ ಪ್ರಾಣ ಭಯದಿಂದ ಜೋರಾಗಿ ಕೂಗಲಾರಂಭಿಸಿದೆ. ಅದರ ಶಬ್ದ ಕೇಳಿದ ಮನೆಯವರು ಹೊರಕ್ಕೆ ಓಡಿ ಬಂದು ಟಾರ್ಚ್‌ಲೈಟ್‌ನಿಂದ ಬೆಳಕು ಹಾಯಿಸಿದಾಗ ಚಿರತೆ ಅಲ್ಲಿಂದ ಓಡಿ ಹೋಗಿದೆ. ಒಂದು ತಿಂಗಳ ಹಿಂದೆ ಇದೇ ನಾಯಿಗೆ ಚಿರತೆ ಕಚ್ಚಿ ಸಾಗಿಸಲೆತ್ನಿಸಿತ್ತು. ಅದರಿಂದ ನಾಯಿ ಕುತ್ತಿಗೆಗೆ ಗಂಭೀರ ಗಾಯಗೊಂಡಿತ್ತು. ಆ ಗಾಯ ಇನ್ನೇನು ಮಾಸುತ್ತಿರುವ ವೇಳೆಯಲ್ಲೇ ಚಿರತೆ ಅದನ್ನು ಮತ್ತೆ ಹಿಡಿಯಲೆತ್ನಿಸಿದೆ. ಚಿರತೆಯನ್ನು ಸೆರೆ ಹಿಡಿಯಲು ಇದೇ ಮನೆ ಪಕ್ಕ ಅರಣ್ಯ ಇಲಾಖೆ ಕುಣಿಕೆಯ ಬೋನನ್ನು ಇರಿಸಿದ್ದು, ಅದರ ಸನಿಹ ಚಿರತೆಗಳು ಪದೇ ಪದೇ ಪ್ರತ್ಯಕ್ಷಗೊಳ್ಳುತ್ತಿದ್ದರೂ, ಈ ತನಕ ಬೋನಿನಲ್ಲಿ ಸಿಕ್ಕಿಬಿದ್ದಿಲ್ಲ. ಕಾರಡ್ಕ, ಕರ್ಮಂತೋಡಿ, ಒಯಕ್ಕೋಲ್ ಮೊದಲಾದೆಡೆಗಳಲ್ಲಿ ಇತ್ತೀಚೆಗಿನಿಂದ  ಚಿರತೆಗಳು ಕಾಣತೊಡಗಿದ್ದು, ಅದು ಈ ಪ್ರದೇಶದ ಸಾಕುಪ್ರಾಣಿಗಳು ಮಾತ್ರವಲ್ಲ ಜನರಿಗೂ ಪ್ರಾಣ ಬೆದರಿಕೆ ಒಡ್ಡತೊಡಗಿದೆ.

RELATED NEWS

You cannot copy contents of this page