ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹೆಡ್ಲಿ: ರಾಣಾನಿಂದ ಮಹತ್ತರ ಸುಳಿವು
ನವದೆಹಲಿ: 2008 ನವಂಬರ್ 11ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಧಾನ ಸೂತ್ರಧಾರ ಡೇವಿಡ್ ಕೋಲ್‌ಮ್ಯಾನ್ ಹೆಡ್ಲಿ ಆಗಿದ್ದಾನೆಂದು ಈ ಪ್ರಕರಣ ಇನ್ನೋರ್ವ ಪ್ರಧಾನ ಆರೋಪಿ ತಹವೂರ್ ಹುಸೈನ್ ರಾಣಾ ವಿಚಾರಣೆ ವೇಳೆ ಬಹಿರಂಗಪಡಿಸಿದ್ದು ಅದರಂತೆ ಹೆಡ್ಲಿಯನ್ನು ವಿಚಾರಣೆಗೊಳಪಡಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂದಾಗಿದೆ. ಹೆಡ್ಲಿ ಅಮೆರಿಕಾದ ಪ್ರಜೆಯಾಗಿದ್ದು, ಆದ್ದರಿಂದ ಅಲ್ಲಿ ಆತನನ್ನು ವಿಚಾರಣೆಗೊಳಪಡಿಸಲು ಎನ್‌ಐಎ ಅಮೆರಿಕಾದ ಸಹಾಯ ಕೋರಿದೆ. ಹೆಡ್ಲಿ ಈಗ ಅಮೆರಿಕಾದ ಜೈಲಿನಲ್ಲಿದ್ದಾನೆ. ಇತರ ದೇಶಗಳಿಗೆ ನನ್ನು ಹಸ್ತಾಂತರಿಸಬಾರದೆಂಬ ನಿಬಂಧನೆ ಮುಂದಿರಿಸಿದ ಬಳಿಕ ಹೆಡ್ಲಿ ಅಮೆರಿಕಾದ ತನಿಖಾ ತಂಡದೊಂದಿಗೆ ವಿಚಾರಣೆಗಾಗಿ ಸಹಕರಿಸಿದ್ದನು. ಆತನ ಆ ಶರತ್ತಿಗೆ ಅಮೆರಿಕಾ ಒಪ್ಪಿಗೆ ನೀಡಿತ್ತು. ಆದ್ದರಿಂದ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಹೆಡ್ಲಿಯನ್ನು ಅಮೆರಿಕಾ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ವಿರಳವಾಗಿದೆ. ಈ ಕಾರಣದಿಂದಾಗಿ ಅಮೆರಿಕಾದ ಜೈಲಿನಿಂದಲೇ ಹೆಡ್ಲಿಯನ್ನು ವಿಚಾರಣೆಗೊಳಪಡಿಸುವ ಪ್ರಯತ್ನದಲ್ಲಿ ಎನ್‌ಐಎ ತೊಡಗಿದೆ.
ಮುಂಬೈ ಭಯೋತ್ಪಾದಕ ದಾಳಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಇ ತೋಯ್ಬಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್‌ಐ ಮತ್ತು ಹೆಡ್ಲಿಯ ಪ್ರಧಾನ ಸೂತ್ರಧಾರಿಕೆಯಲ್ಲಿ ನಡೆದಿದೆ ಎಂದು ತಹವೂರ್ ರಾಣಾ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಪಾಕಿಸ್ತಾನ ಮೂಲದ ತಹವೂರ್ ರಾಣಾ ಕೆನಡಾ ಪ್ರಜೆಯಾಗಿದ್ದಾನೆ. ಮುಂಬೈ ದಾಳಿಗೆ ಸಂಬಂಧಿಸಿದ ವಿಚಾರಣೆಗಾಗಿ ಆತನನ್ನು ಅಮೆರಿಕಾ ಕೆಲವು ದಿನಗಳ ಹಿಂದೆಯಷ್ಟೇ ಭಾರತಕ್ಕೆ ಹಸ್ತಾಂತರಿಸಿತ್ತು. ಆತ ಈಗ ಎನ್‌ಐಎ ಕಸ್ಟಡಿಯಲ್ಲಿದ್ದಾನೆ. ಅಧಿಕಾರಿಗಳು ಆತನನ್ನು ಸತತವಾಗಿ ವಿಚಾರಣೆಗೊಳಪಡಿಸಿದಾಗ ಮುಂಬೈ ದಾಳಿಯಲ್ಲಿ ಹೆಡ್ಲಿಯ ಪ್ರಧಾನ ಸೂತ್ರಧಾರಿಕೆಯನ್ನು ಆತ ಕೊನೆಗೂ ಬಹಿರಂಗಪಡಿಸಿದ್ದಾರೆ.