ಮುನಂಬಂ ನ್ಯಾಯಾಂಗ ಆಯೋಗವನ್ನು ಅಸಿಂಧುಗೊಳಿಸಿ ಹೈಕೋರ್ಟ್ ತೀರ್ಪು
ಕೊಚ್ಚಿ: ಮುನಂಬಂನಲ್ಲಿ ವಕ್ಫ್ ಮಂಡಳಿಗೆ ಸೇರಿದ ವಿವಾದಾತ್ಮಕ ಜಮೀನಿಗೆ ಸಂಬಂಧಿಸಿ ಸರಕಾರ ನೇಮಿಸಿದ್ದ ನ್ಯಾಯಾಂಗ ಆಯೋ ಗವನ್ನು ರಾಜ್ಯ ಹೈಕೋರ್ಟ್ ಇಂದು ಬೆಳಿಗ್ಗೆ ಅಸಿಂಧುಗೊಳಿಸಿ ತೀರ್ಪು ನೀಡಿದೆ.
ನ್ಯಾಯಮೂರ್ತಿ ಬೆಚ್ಚು ಕುರಿಯನ್ ಥೋಮಸ್‌ರನ್ನೊ ಳಗೊಂಡ ಹೈಕೋರ್ಟ್‌ನ ಏಕ ಸದಸ್ಯ ಪೀಠ ಇಂದು ಈ ತೀರ್ಪು ನೀಡಿದೆ. ಮುನಂಬಂನಲ್ಲಿ ವಕ್ಫ್ ಮಂಡಳಿಗೆ ಸೇರಿದ ವಿವಾದಾತ್ಮಕ ಭೂಮಿಯ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಸಿ.ಎಂ. ರಾಮಚಂದ್ರನ್ ನಾಯರ್ ಅಧ್ಯಕ್ಷರಾಗಿರುವ ನ್ಯಾಯಾಂಗ ಆಯೋಗವನ್ನು ರಾಜ್ಯ ಸರಕಾರ ಈ ಹಿಂದೆ ನೇಮಿಸಿತ್ತು. ಅದು ಕಾನೂನಾತ್ಮಕವಾಗಿ ನೆಲೆಗೊಳ್ಳದೆಂಬ ಕಾರಣ ನೀಡಿ ಏಕ ಸದಸ್ಯ ಪೀಠ ಅದನ್ನು ರದ್ದುಪಡಿಸಿದೆ. ನ್ಯಾಯಾಂಗ ಆಯೋಗವನ್ನು ನೇಮಿಸಿದ ಸರಕಾರದ ಕ್ರಮವನ್ನು ಪ್ರಶ್ನಿಸಿ ವಕ್ಫ್ ಮಂಡಳಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ. ಮುನಂಬಂ ಭೂಮಿಯಲ್ಲಿ ವಕ್ಫ್ ಮಂಡಳಿ ದೊಡ್ಡ ಮಟ್ಟದ ಅಧಿಕಾರ ಹೊಂದಿದೆಯೆಂದೂ ತೀರ್ಪುನಲ್ಲಿ ನ್ಯಾಯಾಲಯ ತಿಳಿಸಿದೆ. ಇದೇ ಸಂದರ್ಭದಲ್ಲಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿದ ತೀರ್ಪಿನ ವಿರುದ್ಧ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರಕಾರ ಮುಂದಾಗಿದೆ.