ಮುಳಿಯಾರಿನಲ್ಲಿ ಬೆಂಬಿಡದ ಚಿರತೆ ಭೀತಿ: ಮನೆ ಬಳಿ ಒಂದೇ ಬಾರಿ ಪ್ರತ್ಯಕ್ಷಗೊಂಡ ಐದು ಚಿರತೆಗಳು; ಕೊಡವಂಜಿಯಲ್ಲಿ ನಾಯಿಯನ್ನು ಕಚ್ಚಿ ಕೊಂಡೊಯ್ದ ಚಿರತೆ

ಮುಳಿಯಾರು: ಮುಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಗೊಳ ಪಟ್ಟ ಪ್ರದೇಶದಲ್ಲಿ ಚಿರತೆಗಳ ಭೀತಿ ದಿನೇ ದಿನೇ ಹೆಚ್ಚಾಗುತ್ತಿದ್ದು, ನಿನ್ನೆ ರಾತ್ರಿ   ಮನೆಯೊಂದರ ಪರಿಸರದಲ್ಲಿ ಐದು ಚಿರತೆಗಳು ಗುಂಪಾಗಿ ಏಕಕಾಲದಲ್ಲಿ ಪ್ರತ್ಯಕ್ಷಗೊಂಡಿದೆ.

ಮುಳಿಯಾರು ಪಯೋಲಾದ ಕಲೆಯಪ್ಪಾಡಿ ಕೃಷ್ಣನ್‌ರ ಮನೆ ಪರಿಸರದಲ್ಲಿ  ನಿನ್ನೆ ರಾತ್ರಿ  ಚಿರತೆಗಳು ಗುಂಪಾಗಿ ಕಾಣಿಸಿಕೊಂಡಿದೆ. ನಿನ್ನೆ ಮನೆಯವರು ಅಲ್ಲೇ ಪಕ್ಕದ ದೈವಕೋಲ ಉತ್ಸವಕ್ಕೆ  ಹೋಗಿದ್ದು ಅಲ್ಲಿಂದ ರಾತ್ರಿ ಮನೆಗೆ ಹಿಂತಿರುಗುವ ವೇಳೆ ಮನೆ ಪರಿಸರದಲ್ಲಿ ಐದು ಚಿರತೆಗಳು ಪ್ರತ್ಯಕ್ಷಗೊಂಡಿರುವುದನ್ನು ಕಂಡು ಭೀತಿಗೊಂಡಿದ್ದಾರೆ.  ನಂತರ ಚಿರತೆಗಳು ಅಲ್ಲಿಂದ ಬೇರೆಡೆಗೆ ಸಾಗಿದೆ. ಈ ಪರಿಸರದ ನಾಯಿಗಳು ಮತ್ತಿತರ ಸಾಕುಪ್ರಾಣಿಗಳನ್ನು  ಹಿಡಿಯಲೆಂದು ಚಿರತೆಗಳು ಬಂದಿರ ಬಹುದೆಂದು ಅಂದಾಜಿಸಲಾಗಿದೆ.  ವಿಷಯ ತಿಳಿದ ಅರಣ್ಯ ಅಧಿಕಾರಿಗಳ ತಂಡ ಸ್ಥಳಕ್ಕಾಗಮಿಸಿ ವ್ಯಾಪಕ ಶೋಧ ನಡೆಸಿದರೂ ಚಿರತೆಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಇದೇ ಪಂಚಾಯತ್‌ನ ಕೊಡವಂಜಿ ಅಡ್ಕಂ ರಸ್ತೆ ಬಳಿಯ   ರಾಜೇಟನ್ ಬೇಪು ಎಂಬವರ ನಾಯಿಯನ್ನು ಚಿರತೆ ಕಚ್ಚಿ ಸಾಗಿಸುತ್ತಿರುವುದು ಆ ದಾರಿಯಾಗಿ  ರಿಕ್ಷಾದಲ್ಲಿ ಬರುತ್ತಿದ್ದ ಕುಟುಂಬ ವೊಂದು ಕಂಡಿದೆ. ತಕ್ಷಣ ಅವರು ಅರಣ್ಯ ಪಾಲರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಅರಣ್ಯ ಇಲಾಖೆಯ ತಂಡ ಆಗಮಿಸಿ ಆ ಪರಿಸರದಲ್ಲಿ ವ್ಯಾಪಕ  ಶೋಧ ನಡೆಸಿದರೂ ಚಿರತೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಚಿರತೆಗಳ ಉಪಟಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ಬಗ್ಗೆ ಮುಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಎ. ಜನಾರ್ದನನ್ ಜನರಿಗೆ ಜಾಗ್ರತಾ ನಿರ್ದೇಶ ನೀಡಿದ್ದಾರೆ.

ಮುಳಿಯಾರು ಪಂಚಾಯತ್‌ನಲ್ಲಿ ಚಿರತೆಗಳ ಹಾವಳಿ ಆರಂಭಗೊಂಡು ತಿಂಗಳುಗಳು ಕಳೆದಿವೆ. ಅದನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಹಲವೆಡೆಗಳಲ್ಲಿ  ಬೋನುಗಳನ್ನು ಇರಿಸಿದರೂ ಅದರಲ್ಲಿ ಈತನಕ ಕನಿಷ್ಠ ಒಂದಾದರೂ ಚಿರತೆ ಸಿಕ್ಕಿಬಿದ್ದಿಲ್ಲ. ಚಿರತೆಗಳನ್ನು ಪತ್ತೆಹಚ್ಚಲು ಅರಣ್ಯ ಅಧಿಕಾರಿಗಳು ಮುಳಿಯಾರು ಪಂಚಾಯತ್‌ನ ಹಲವೆಡೆಗಳಲ್ಲಿ ಕ್ಯಾಮರಾಗಳನ್ನು ಇರಿಸಿದ್ದಾರೆ. ಮಾತ್ರವಲ್ಲ ಚಿರತೆಗಳನ್ನು ಸೆರೆಹಿಡಿಯಲು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದರೂ ಅದರಿಂದ ಈತನಕ ಯಾವುದೇ ಪ್ರಯೋಜನ ಉಂಟಾಗಿಲ್ಲ.

ಚಿರತೆಗಳ ಹಾವಳಿಯಿಂದಾಗಿ ಮನೆಯಿಂದ ಹೊರಬರಲು ಜನರು ಹೆದರುವ ಸ್ಥಿತಿ ನಿರ್ಮಾಣಗೊಂಡಿದೆ. ಮಕ್ಕಳನ್ನು ಮನೆಯಿಂದ ಹೊರಬಿಡಲು ಜನರು ಭಯಪಡುತ್ತಿದ್ದಾರೆ. ಹಲವು ಮನೆಗಳ ಸಾಕು ನಾಯಿಗಳನ್ನು ಚಿರತೆ ಹೊತ್ತೊಯ್ದಿದೆ  ಅಲ್ಲದೆ ಇತರ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿದ ಘಟನೆಯೂ ನಡೆದಿದೆ. ಚಿರತೆ ಕಾಟಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಆಗ್ರಹಿಸಿ ಪ್ರದೇಶದ ಜನರು ಈಗ ಪ್ರತ್ಯಕ್ಷ ಹೋರಾಟ ಕ್ಕಿಳಿದಿದ್ದಾರೆ

Leave a Reply

Your email address will not be published. Required fields are marked *

You cannot copy content of this page