ಮೈಸೂರಿನ ಚಾಲಕನನ್ನು ಅಪಹರಿಸಿ ದಿಗ್ಬಂಧನದಲ್ಲಿರಿಸಿ ದೌರ್ಜನ್ಯ: ಏಳು ಮಂದಿ ವಿರುದ್ಧ ಕೇಸು, ಓರ್ವ ಸೆರೆ
ಕಾಸರಗೋಡು: ಮೈಸೂರಿನ ವಾಹನ ಚಾಲಕನನ್ನು ಕಾರಿನಲ್ಲಿ ಅಪಹರಿಸಿ ನಾಲ್ಕು ದಿನ ದಿಗ್ಬಂಧನದಲ್ಲಿರಿಸಿ ಹಲ್ಲೆ ನಡೆಸಿ ಹಣ ಪಡೆದ ದೂರಿನಂತೆ ಏಳು ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೆಂಗಳಕ್ಕೆ ಸಮೀಪದ ಎರುದುಂಕಡವು ನಿವಾಸಿ ಮೊದೀನ್ ಕುಂಞಿ (45) ಬಂಧಿತನಾದ ಆರೋಪಿ. ವಿದ್ಯಾನಗರ ಪೊಲೀಸ್ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್‌ರ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ.ಮೈಸೂರು ದಕ್ಷಿಣದ ರಾಮನಹಳ್ಳಿ ತನ್‌ವೀರ್‌ಸೆಟ್ ನಗರದ ಪಿಕ್‌ಅಪ್ ವಾಹನ ಚಾಲಕ ಮೊಹಮ್ಮದ್ ರಫೀಕ್ (45) ಎಂಬವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಆರೋಪಿಯನ್ನು ಬಂಧಿಸಲಾಗಿದೆ. ಮೊಯ್ದೀನ್ ಕುಂಞಿಯ ಹೊರತಾಗಿ ಮಧೂರು ನಿವಾಸಿಗಳಾದ ಮಚ್ಚು, ಸಿದ್ದಿಖ್ ಮತ್ತು ಮೊಯ್ದು ಎಂಬವರು ಸೇರಿ ಒಟ್ಟು ಏಳು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುಗಾರ ಮೊಹಮ್ಮದ್ ರಫೀಕ್ ಪಿಕ್‌ಅಪ್ ವ್ಯಾನ್‌ನಲ್ಲಿ ಕಸಾಯಿಖಾನೆಗೆ ತಲುಪಿಸುವ ಕೋಣಗಳೊಂದಿಗೆ ಅಕ್ಟೋಬರ್ 18ರಂದು ಉಪ್ಪಳಕ್ಕೆ ಬಂದಿದ್ದರು. ನಂತರ ಅವರು ಅಲ್ಲಿಂದ ಊರಿಗೆ ಹಿಂತಿರುಗುವ ವೇಳೆ ನಾಲ್ಕು ಮಂದಿ ಅಲ್ಲಿಗೆ ಬಂದು ‘ನಿನ್ನ ಮಗ ತನಗೆ ಹಣ ನೀಡಲು ಬಾಕಿ ಇದೆ ಎಂದೂ, ಅದನ್ನು ನೀಡುವಂತೆ ಮೊಯ್ದೀನ್ ಕುಂಞಿ ಕೇಳಿದ್ದರೆಂದೂ, ಆಗ ತನ್ನ ಕೈಯಲ್ಲಿ ಹಣವಿಲ್ಲವೆಂದು ಮೊಹಮ್ಮದ್ ರಫೀಕ್ ಹೇಳಿದಾಗ ಮೊಯ್ದೀನ್ ಕುಂಞಿ ಸೇರಿ ನಾಲ್ಕು ಮಂದಿ ಅವರನ್ನು ಬಲವಂತವಾಗಿ ತಮ್ಮ ಕಾರಿಗೇರಿಸಿ ಕರೆದೊಯ್ದು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಪ್ರದೇಶದ ಫಾರಂ ಹೌಸ್ ಮತ್ತು ಮನೆಯೊಂದರಲ್ಲಿ ಅಕ್ಟೋಬರ್ 24ರ ತನಕ ಕೂಡಿ ಹಾಕಿ ಹಲ್ಲೆ ನಡೆಸಿ, ಬೆದರಿಸಿ ಗೂಗಲ್ ಪೇ ಮೂಲಕ 55,000 ರೂ. ಪಡೆದರೆಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನಾದ ಮೊಯ್ದೀನ್ ಕುಂಞಿಗೆ ಕೋಣಗಳ ಮಾರಾಟ ವತಿಯಿಂದ ದೂರುದಾರ ಮೊಹ ಮ್ಮದ್ ರಫೀಕ್‌ನ ಮಗ ಮೊಹಮ್ಮದ್ ಶಫೀಕ್ ಆರು ಲಕ್ಷ ರೂ. ನೀಡಲು ಬಾಕಿಯಿತ್ತೆಂದೂ, ಅದನ್ನು ಆತ ಹಿಂತಿರುಗಿಸದ ದ್ವೇಷದಿಂದ ಆರೋಪಿಗಳು ಮೊಹಮ್ಮದ್ ರಫೀಕ್‌ನನ್ನು ಅಪಹರಣ ನಡೆಸಿ ಹಣ ಎಗರಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಾದ ಮೊಯ್ದೀನ್ ಕುಂಞಯನ್ನು ನಂತರ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.