ಮೊಟಕುಗೊಳಿಸಿದ ಪೆರುವಾಡ್ ಕಾಲುದಾರಿ ಕಾಮಗಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಪುನರಾರಂಭದ ಭರವಸೆ
ಕುಂಬಳೆ: ಅಂಡರ್‌ಪಾಸ್‌ಗೆ ಬೇಕಾಗಿ ನಡೆಸಿದ ಹೋರಾಟದ ಕೊನೆಗೆ ಮಂಜೂರಾದ ಪೆರುವಾಡ್ ಫೂಟ್ ಓವರ್‌ಬ್ರಿಡ್ಜ್ ನಿರ್ಮಾಣ ಕುಂಬಳೆ ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸಫ್ ಹಸ್ತಕ್ಷೇಪ ನಡೆಸಿ ಮೊಟಕು ಗೊಳಿಸಿದರು. ಘಟನೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲುದಾರಿಗಿರುವ ಕಾಮಗಾರಿ ಆರಂಭಗೊಂಡು ಫೌಂಡೇಶನ್ ಹಾಕಿದ ಬಳಿಕ ಪಂ. ಅಧ್ಯಕ್ಷೆ ರಸ್ತೆ ನಿರ್ಮಾಣ ಗುತ್ತಿಗೆದಾ ರರನ್ನು ಸಮೀಪಿಸಿ ನಿರ್ಮಾಣವನ್ನು ಮೊಟಕುಗೊಳಿಸಲು ತಿಳಿಸಿದ್ದಾರೆನ್ನ ಲಾಗಿದೆ. ಈ ಬಗ್ಗೆ ಊರಾಲುಂಗಳ್ ಸೊಸೈಟಿಗೆ ಪತ್ರ ನೀಡಿರುವುದಾಗಿ ಹೇಳಲಾಗುತ್ತಿದೆ. ಜನರ ಬೇಡಿಕೆಗೆ ಕೊಡಲಿ ಹಾಕಲು ಜನಪ್ರತಿನಿಧಿಗಳಿ ರುವುದೇ ಎಂಬ ಪ್ರಶ್ನೆಗೆ ಮೇಲಿನಿಂದ ತನಗೆ ಒತ್ತಡ ಉಂಟಾಗಿದೆ ಎಂದು ಆ ಹಿನ್ನೆಲೆಯಲ್ಲಿ ಪತ್ರ ನೀಡಿರುವುದಾಗಿ ಆಧ್ಯಕ್ಷೆ ಪ್ರತಿಕ್ರಿಯಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆಗದರೆ ಮೇಲಿನಿಂದ ಒತ್ತಡ ಹಾಕಿದವರು ಯಾರೆಂಬುದು, ಒತ್ತಡಕ್ಕೆ ಕಾರಣವೇನೆಂಬುದನ್ನು ಅಧ್ಯಕ್ಷೆ ಬಹಿರಂಗಪಡಿಸಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.
ಆದರೆ ಓರ್ವ ವ್ಯಕ್ತಿಗೆ ಬೇಕಾಗಿ ಸ್ಥಳೀಯರಲ್ಲಿ ಮಾಹಿತಿ ಕೇಳದೆ ಅಧ್ಯಕ್ಷೆ ಸ್ವಂತ ಇಷ್ಟ ಪ್ರಕಾರ ಈ ರೀತಿ ಪತ್ರ ನೀಡಿರುವುದರಿಂದ ನಿರ್ಮಾಣ ಮೊಟಕುಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದು ಇಲ್ಲಿನವರಲ್ಲಿ ವ್ಯಾಪಕ ರೋಷ ಸೃಷ್ಟಿ ಮಾಡಿದೆ.
ಜನರ ಪ್ರತಿಭಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ತಲುಪಿ ಕಾಮಗಾರಿಯನ್ನು ಮತ್ತೆ ಮುಂದುವರಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಶಾಸಕ ಎಕೆಎಂ ಅಶ್ರಫ್, ಪಂ. ಅಧ್ಯಕ್ಷೆ ತಾಹಿರಾ ಯೂಸಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಳೀಯ ಜನಪ್ರತಿನಿಧಿಗಳು ಮೊದಲಾದವರು ಸ್ಥಳ ಸಂದರ್ಶಿಸಿ ಸ್ಥಳೀಯರ ದೂರು ಆಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಚಿಸಿದ ಸ್ಥಳದಲ್ಲೇ ಮತ್ತೆ ಕಾಮಗಾರಿ ಪುನರಾರಂಭಿಸುವುದಾಗಿ ಅವರು ಜನರಿಗೆ ಭರವಸೆ ನೀಡಿದ್ದಾರೆ. ಈ ವೇಳೆ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಎನ್.ವಿ. ಇಬ್ರಾಹಿಂ, ಮೈದಾನ್ ಹನೀಫ್, ಅಶ್ರಫ್ ಪೆರುವಾಡ್, ನಿಸಾರ್ ಪೆರುವಾಡ್, ಸಹದೇವನ್, ಅಲಿ ಪೆರವಾಡ್, ಅಬ್ದುಲ್ಲ ಪಿ.ಎಚ್, ಸಿದ್ದಿಕ್ ಪೆರುವಾಡ್ ಭಾಗವಹಿಸಿದರು.