ಯುವಕನ ಮೃತದೇಹ ಮಲಗುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಹೊಸದುರ್ಗ: ಮನೆಯ ಮಹಡಿಯ ಮಲಗುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಹಚ್ಚಲಾಗಿದೆ. ವಲಿಯಪರಂಬ್, ಮಾವಿಲಕಡಪ್ಪುರಂ ಒರಿಯಾರ ಕೆ.ಸಿ ಹೌಸ್‌ನ ಕೆ.ಸಿ. ಅಬ್ದುಲ್ ಖಾದರ್‌ರ ಪುತ್ರ ಪಿ. ಮೊಹಮ್ಮದ್ ನವಾಸ್ (27) ಆತ್ಮಹತ್ಯೆಗೈದ ಯುವಕ. ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಸ್ಪಷ್ಟವಲ್ಲ. ಕೊಲ್ಲಿಯಲ್ಲಿದ್ದ ನವಾಸ್ ಎರಡು ತಿಂಗಳ ಹಿಂದೆ ಊರಿಗೆ ತಲುಪಿದ್ದರು. ವಿವಾಹ ಸಿದ್ಧತೆಯಲ್ಲಿರುವ ಮಧ್ಯೆ ಆತ್ಮಹತ್ಯೆ ನಡೆದಿದೆ. ಮೃತರು ತಂದೆ, ತಾಯಿ ಸುಬೈದ, ಸಹೋದರಿಯರಾದ ಶರ್ಫ, ಖಮರುನ್ನೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.