ಯುವಮೋರ್ಛಾ ನೇತಾರನ ಕೊಲೆ ಪ್ರಕರಣ: ತಲೆಮರೆಸಿಕೊಂಡ ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ

ಸುಳ್ಯ:  ಯುವಮೋರ್ಛಾ ನೇತಾರ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಯುಧಗಳಿಂದ ಆಕ್ರಮಿಸಿ ಬರ್ಭರವಾಗಿ ಕೊಲೆಗೈದ ಪ್ರಕರಣದಲ್ಲಿ  ತಲೆಮರೆಸಿಕೊಂಡ ಆರೋಪಿಗಳಿಗಾಗಿ ಎನ್‌ಐಎ ತನಿಖೆ ತೀವ್ರಗೊಳಿಸಿದೆ. ಇದರ ಅಂಗವಾಗಿ ಮೂವರು ಆರೋಪಿಗಳ ಸುಳಿವು ನೀಡಿದವರಿಗೆ  ನಗದು ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಶಾದ್ (೩೨), ಸೋಮವಾರಪೇಟೆಯ ಕಲಕಂದೂರು ನಿವಾಸಿ ಅಬ್ದುಲ್ ರಹಿಮಾನ್ (೩೬), ಅಬ್ದುಲ್ ನಾಸಿರ್ (೪೧) ಎಂಬಿವರ ಕುರಿತು ಸುಳಿವು ನೀಡಿದವರಿಗೆ ತಲಾ ೨ ಲಕ್ಷ ರೂಪಾಯಿ ಬಹುಮಾನ ನೀಡು ವುದಾಗಿ ತಿಳಿಸಲಾಗಿದೆ. ಈ ಮೂವರು ಆರೋಪಿಗಳು ನಿಷೇಧಿತ ಸಂಘಟನೆ ಯಾದ ಪಿಎಫ್‌ಐನ ಕಾರ್ಯಕರ್ತ ರಾಗಿದ್ದಾರೆಂದು ಹೇಳಲಾಗುತ್ತಿದೆ.

೨೦೨೨ರ ಜುಲೈ ೨೬ರಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳ ತಂಡ ಮಾರಕಾಯುಧಗಳಿಂದ ಆಕ್ರಮಿಸಿ ಕೊಲೆಗೈದಿತ್ತು.  ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಅಂದು ರಾತ್ರಿ ಅಂಗಡಿಮುಚ್ಚಿ ಮನೆಗೆ ತೆರಳಲು ಸಿದ್ಧನಾಗುತ್ತಿದ್ದಂತೆ ಬೈಕ್‌ಗಳಲ್ಲಿ ತಲುಪಿದ ಆರೋಪಿಗಳು ದಿಢೀರ್ ಆಕ್ರಮಣ ನಡೆಸಿದ್ದರು. ಆಕ್ರಮಣದಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್‌ರನ್ನು ಅಲ್ಲಿ ಸೇರಿದ್ದ ಮಂದಿ  ಕೂಡಲೇ ಪುತ್ತೂರಿನ ಆಸ್ಪತ್ರೆಗೆ ತಲುಪಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿಗಳು ವಿವಿಧ ಕಡೆಗಳಿಗೆ  ಪರಾರಿಯಾಗಿದ್ದರು. ಈ ಪೈಕಿ ಹಲವು ಆರೋಪಿಗಳನ್ನು ಎನ್‌ಐಎ ಈಗಾಗಲೇ ಸೆರೆಹಿಡಿದಿದೆ.

 ಭಾರೀ ಕೋಲಾಹಲ ಸೃಷ್ಟಿಸಿದ ಈ ಕೊಲೆ ಪ್ರಕರಣದ ತನಿಖೆಯನ್ನು ಮೊದಲು ಸ್ಥಳೀಯ ಪೊಲೀಸರು ನಡೆಸಿದ್ದರು. ಬಳಿಕ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.  ತಲೆಮರೆಸಿಕೊಂಡ ಆರೋಪಿಗಳನ್ನು  ಸೆರೆಹಿಡಿದರೆ ಮಾತ್ರವೇ ಕೊಲೆಕೃತ್ಯದ ಪೂರ್ಣ ಮಾಹಿತಿ ಬೆಳಕಿಗೆ ತರಲು ಸಾಧ್ಯವಿದೆಯೆಂದು ತನಿಖಾ ತಂಡ ಅಂದಾಜಿಸಿದೆ.

RELATED NEWS

You cannot copy contents of this page