ರಸ್ತೆಬದಿ ಒಣಗಿದ ಮರಗಳಿಂದ ಅಪಾಯಭೀತಿ
ಉಪ್ಪಳ: ಕೈಕಂಬ- ಬಾಯಾರು ಮಧ್ಯೆ ಜೋಡುಕಲ್ಲು ಎಂಬಲ್ಲಿ ರಸ್ತೆ ಬದಿ ಒಣಗಿದ ಮರಗಳು ಅಪಾಯಭೀತಿಯೊಡ್ಡುತ್ತಿದೆ. ಯಾವುದೇ ಕ್ಷಣದಲ್ಲಿ ಮರಗಳು ಮುರಿದು ಬೀಳುವ ಸಾಧ್ಯತೆಯಿದ್ದು, ಇದು ಆತಂಕ ಮೂಡಿಸಿದೆಯೆಂದು ಸಾರ್ವಜನಿಕರು ತಿಳಿಸುತ್ತಿದ್ದಾರೆ.
ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವ ವೇಳೆ ಅಪಾಯ ಸ್ಥಿತಿಯಲ್ಲಿರುವ ಮರಗಳನ್ನು ಕಡಿದು ತೆರವುಗೊಳಿಸಲಾಗಿತ್ತು. ಆದರೆ ಒಣಗಿದ ಈ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿಲ್ಲ. ಈ ಪರಿಸರದಿಂದ ವಿದ್ಯುತ್ ತಂತಿ ಹಾದುಹೋಗಿರುವ ಕಂಬಗಳೂ ಇದ್ದು, ಮರ ಮುರಿದು ಬಿದ್ದಲ್ಲಿ ವಿದ್ಯುತ್ ತಂತಿಗೆ ಅಪ್ಪಳಿಸಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆ ಇದಾಗಿದ್ದು, ಹಲವಾರು ವ್ಯಾಪಾರ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಪಾಯ ಭೀತಿಯೊಡ್ಡುತ್ತಿರುವ ಒಣಗಿದ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತಾ ಯು ಶೆಟ್ಟಿ ರಸ್ತೆ ಅಭಿವೃದ್ಧಿಯ ಗುತ್ತಿಗೆದಾರರ ಪೈವಳಿಕೆಯಲ್ಲಿರುವ ಕಚೇರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.