ರಸ್ತೆಯಲ್ಲೇ ಅಲೆದಾಡತೊಡಗಿದ ಕಾಡುಕೋಣಗಳು: ಬೋವಿಕ್ಕಾನ-ಇರಿಯಣ್ಣಿ ಮಧ್ಯೆ ಪ್ರಯಾಣಿಕರಿಗೆ ಆತಂಕ
ಮುಳ್ಳೇರಿಯ: ಚಿರತೆಗಳ ಹಾವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಜನರು ಭಯಭೀತರಾಗಿರುವಾಗಲೇ ಕಾಡು ಕೋಣ ಕೂಡಾ ಕಾಣಿಸಿಕೊಂಡಿದ್ದು, ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.
ಬೋವಿಕ್ಕಾನ-ಇರಿಯಣ್ಣಿ ರಸ್ತೆಯ ಮಂಜಕ್ಕಲ್ ಪರಿಸರ ಪ್ರದೇಶಗಳಲ್ಲಿ ಕಾಡುಕೋಣ ಕಂಡುಬಂದಿದೆ. ಇರಿಯಣ್ಣಿ ಕಾಡಿನಲ್ಲಿ ಏಳು ಕಾಡುಕೋಣಗಳಿವೆ ಎಂದು ಆಂದಾಜಿಸಲಾಗಿದೆ. ಕಾಡು ಮಾತ್ರವಲ್ಲದೆ ರಸ್ತೆಯಲ್ಲೂ ಹಿಂಡಾಗಿ ಕಾಣಿಸಿಕೊಳ್ಳುವ ಕಾಡುಕೋಣಗಳು ಈ ಹಿಂದೆ ವಾಹನ ಪ್ರಯಾಣಿಕರ ಮೇಲೆ ದಾಳಿ ನಡೆಸಿದ ಘಟನೆ ನಡೆದಿಲ್ಲ. ಆದರೂ ಜನರು ಜಾಗ್ರತರಾಗದಿದ್ದಲ್ಲಿ ಅವುಗಳು ದಾಳಿ ನಡೆಸುವ ಸಾಧ್ಯತೆಯೂ ಇದೆ. ವಾಹನದ ಮುಂದೆ ದಿಢೀರ್ ಕಾಡುಕೋಣಗಳು ತಲುಪಿದಲ್ಲಿ ದಾಳಿ ನಡೆಸಲು ಸಾಧ್ಯತೆಯಿದೆಯೆಂದು ಅರಣ್ಯಾಧಿಕಾರಿಗಳು ತಿಳಿಸುತ್ತಿದ್ದಾರೆ. ರಸ್ತೆಯಲ್ಲಿ ಅಗತ್ಯದಷ್ಟು ಬೆಳಕಿಲ್ಲದೆಡೆ ಹಾಗೂ ತಿರುವುಗಳಲ್ಲಿ ಕಾಡುಕೋಣ ಗಳಿದ್ದರೆ ಪ್ರಯಾಣಿಕರಿಗೆ ಗೋಚರಿಸದಿ ರಬಹುದು. ರಸ್ತೆಯಲ್ಲಿರುವ ಕಾಡು ಕೋಣಗಳ ಚಿತ್ರವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಲು ಅಥವಾ ಅವುಗಳ ಸಮೀಪದಲ್ಲಿ ವಾಹನವನ್ನು ನಿಲ್ಲಿಸಿ ಕೆಳಗಿಳಿಯುವುದು ಅಪಾಯಕ್ಕೆ ಕಾರಣವಾಗಲಿದೆಯೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಿದ್ದಾರೆ.