ರಸ್ತೆ ಬದಿ ತುಂಬಿಕೊಂಡ ಕಾಡುಪೊದೆ ಮಧ್ಯೆ ತ್ಯಾಜ್ಯವೂ ಸೇರಿ ಸಂಚಾರ ಸಮಸ್ಯೆ
ಉಪ್ಪಳ: ಮಂಗಲ್ಪಾಡಿ ಪಂ. ವ್ಯಾಪ್ತಿಯ ವಿವಿಧ ಕಡೆಗಳ ಒಳ ರಸ್ತೆ ಬದಿಯಲ್ಲಿ ಕಾಡು ಪೊದೆಗಳು ಹಬ್ಬಿಕೊಂಡಿದ್ದು, ಇದರ ಮರೆಯಲ್ಲಿ ತ್ಯಾಜ್ಯಗಳನ್ನು ತಂದೆಸೆಯಲಾಗುತ್ತಿದೆ. ಇದರಿಂದಾಗಿ ಹಂದಿ ಸಹಿತ ವಿಷ ಜಂತುಗಳ ವಾಸಸ್ಥಳವಾಗಿ ರಸ್ತೆ ಬದಿ ಮಾರ್ಪಾಡುಗೊಂಡಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ನಯಾಬಜಾರ್- ಸೋಂಕಾಲು ರಸ್ತೆ ಮಧ್ಯೆ ಕುದುಕೋಟಿ, ಪ್ರತಾಪನಗರ ಸಹಿತ ರಸ್ತೆಯ ಇಕ್ಕಡೆಗಳಲ್ಲಿ ಕಾಡು ಪೊದೆಗಳು ಬೆಳೆದುಕೊಂಡಿದೆ. ಕುದುಕೋಟಿಯಲ್ಲಿ ಈ ಪೊದೆಗಳ ಮಧ್ಯೆ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ತುಂಬಿಕೊಂಡಿದ್ದು ದುರ್ವಾಸನೆ ಬೀರುತ್ತಿದೆ. ಈ ಪರಿಸರದಲ್ಲಿ ಹಗಲಿನಲ್ಲೇ ಕಾಡು ಪ್ರಾಣಿಗಳು ಅಡ್ಡಾದಿಡ್ಡಿ ಸಂಚರಿಸುತ್ತಿದ್ದು, ಇದರಿಂದ ಅಪಘಾತಕ್ಕೂ ಕಾರಣವಾಗು ತ್ತಿರುವುದಾಗಿ ವಾಹನ ಚಾಲಕರು ತಿಳಿಸುತ್ತಾರೆ.
ಪಂಚಾಯತ್ ಅಧಿಕಾರಿಗಳು ತ್ಯಾಜ್ಯ ಹಾಗೂ ಪೊದೆಗಳನ್ನು ಕಡಿದು ಶುಚಿಗೊಳಿಸಲು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ರೋಷಕ್ಕೆ ಕಾರಣವಾಗಿದೆ. ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆ ತ್ಯಾಜ್ಯ ಸಂಗ್ರಹಕೇಂದ್ರವಾಗಿ ಮಾರ್ಪಾಡಾಗಿರುವುದು ಸಂಚಾರಿಗಳಿಗೆ ಸಮಸ್ಯೆಯಾಗಿದೆ.