ರಾಜ್ಯದಲ್ಲೇ ಅತೀ ದೊಡ್ಡ ಮಾದಕದ್ರವ್ಯ ಬೇಟೆ: ಮನೆಯಲ್ಲಿ ಬಚ್ಚಿಡಲಾಗಿದ್ದ 3.4 ಕಿಲೋ ಎಂಡಿಎಂಎ ಪತ್ತೆ: ಯುವಕ ಸೆರೆ
ಉಪ್ಪಳ: ಮಂಜೇಶ್ವರ ಪೊಲೀಸರು ಪತ್ವಾಡಿಯಲ್ಲಿ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ಬಚ್ಚಿಡಲಾಗಿದ್ದ 3.407 ಕಿಲೋ ಎಂಡಿಎಂಎ, 642.065 ಗ್ರಾಂ ಗಾಂಜಾ, ೩೦ ಮಾದಕ ಮಾತ್ರೆಗಳು ಸೇರಿದಂತೆ ವಿವಿಧ ಮಾದಕ ದ್ರವ್ಯಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದು ಇಡೀ ರಾಜ್ಯದಲ್ಲೇ ನಡೆದ ಅತೀ ದೊಡ್ಡ ಮಾದಕದ್ರವ್ಯ ಬೇಟೆಯಾಗಿದೆ.
ಉಪ್ಪಳಕ್ಕೆ ಸಮೀಪದ ಮುಳಿಂಜ ಗ್ರಾಮದ ಪತ್ವಾಡಿಯ ಅಸ್ಕರ್ ಅಲಿ (26) ಎಂಬಾತನ ಮನೆಯಿಂದ ಈ ಮಾದಕ ದ್ರವ್ಯ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಅಸ್ಕರ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ತಿಂಗಳು 30ರಂದು ಮೇಲ್ಪರಂಬ ಪೊಲೀಸರು ಕೈನೋತ್ತ್ ರಸ್ತೆ ಬಳಿಯಿಂದ 49.33 ಎಂಡಿಎಂಎ ಸಹಿತ ಮೂಲತಃ ಕರ್ನಾಟಕ ಮೂಡಿಗೆರೆ ನಿವಾಸಿಯೂ, ಈಗ ಕಳನಾಡುನಲ್ಲಿ ವಾಸಿಸುತ್ತಿರುವ ಅಬ್ದುಲ್ ರಹಿಮಾನ್ ಬಿ.ಇ. ಅಲಿಯಾಸ್ ರವಿ (28) ಎಂಬಾತನನ್ನು ಬಂಧಿಸಿದ್ದರು. ಆತನನ್ನು ತೀವ್ರ ವಿಚಾರಣೆಗೊಳಪಡಿಸಿ ದಾಗ ಆತನಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್, ಬೇಕಲ ಡಿವೈಎಸ್ಪಿ ವಿ.ವಿ. ಮನೋಜ್, ಮೇಲ್ಪರಂಬ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್, ಮಂಜೇಶ್ವರ ಎಸ್ಐ ಅಖಿಲ್ರ ನೇತೃತ್ವದ ಪೊಲೀಸರು ಪತ್ವಾಡಿಯಲ್ಲಿರುವ ಅಸ್ಕರ್ ಅಲಿಯ ಮನೆಗೆ ನಿನ್ನೆ ದಾಳಿ ನಡೆಸಿದ್ದಾರೆ. ಆ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ನಂತರ ಪೊಲೀಸರು ಅಸ್ಕರ್ ಅಲಿಯನ್ನು ಇವರ ಸಹಾಯದಿಂದ ಉಪಾಯ ದಿಂದ ಕರೆಸಿ ತೀವ್ರ ವಿಚಾರಣೆಗೊಳ ಪಡಿಸಿದ ಬಳಿಕ ಮನೆಯೊಳಗೆ ನಡೆಸಿದ ತಪಾಸಣೆಯಲ್ಲಿ ಭಾರೀ ಪ್ರಮಾಣದ ಎಂಡಿಎಂಎ ಮತ್ತಿತರ ಮಾದಕ ದ್ರವ್ಯಗಳನ್ನು ಪತ್ತೆಹಚ್ಚಿದ್ದಾರೆ. ಬಳಿಕ ಅಸ್ಕರ್ ಅಲಿ ವಿರುದ್ಧ ಪೊಲೀಸರು ಎನ್ಡಿಪಿಎಸ್ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಬಂಧಿತ ಅಸ್ಕರ್ ಅಲಿ ಉಪ್ಪಳದ ಜವುಳಿ ಅಂಗಡಿಯೊಂದರ ನೌಕರನಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ದಂಧೆಯಲ್ಲಿ ಇತರ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸು ತ್ತಿದ್ದಾರೆ. ಬಂಧಿತ ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಅತೀ ಹೆಚ್ಚು ಎಂಬಂತೆ ತ್ರಿಶೂರಿನಿಂದ 2.5 ಕಿಲೋ ಹಾಗೂ ನಂತರ ಕಣ್ಣೂರಿನಿಂದ 2 ಕಿಲೋ ಎಂಡಿಎಂಎ ಪತ್ತೆಹಚ್ಚಲಾಗಿತ್ತು. ಅದನ್ನು ಮೀರಿ ರಾಜ್ಯದಲ್ಲಿ ಅತೀ ಹೆಚ್ಚು ಎಂಬಂತೆ ಈಗ 3.4 ಕಿಲೋ ಎಂಡಿಎಂಎ ನಿನ್ನೆ ಉಪ್ಪಳದಿಂದ ಪತ್ತೆಹಚ್ಚಲಾಗಿದೆ. ಇದಕ್ಕೆ ಕೋಟಿಗಟ್ಟಲೆ ರೂ. ಬೆಲೆ ಇದೆ. ಎಂದು ಪೊಲೀಸರು ಹೇಳುತ್ತಿದ್ದಾರೆ.
ನಿನ್ನೆ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸರಾದ ಧನೇಶ್, ವಂದನಾ, ಸುಬಿತ್ ಮತ್ತು ಪೊಲೀಸ್ ಜೀಪ್ ಚಾಲಕ ಪ್ರಶೋಬ್ ಎಂಬವರು ಒಳೊಗಂಡಿದ್ದರು.