ರಾಷ್ಟ್ರೀಯ ಹೆದ್ದಾರಿಯ ಹೊಂಡಕ್ಕೆ ಸಿಲುಕಿ ಕಾರು ಪಲ್ಟಿ: ಸುಳ್ಯದ ಐವರಿಗೆ ಗಾಯ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆಯುತ್ತಿರುವ ರಸ್ತೆಯ ಹೊಂಡಕ್ಕೆ ಕಾರು ಸಿಲುಕಿ ಪಲ್ಟಿಹೊಡೆದು ಅದರಲ್ಲಿದ್ದ ಸುಳ್ಯ ನಿವಾಸಿಗಳಾದ ಐದು ಮಂದಿ ಗಂಭೀರ ಗಾಯಗೊಂಡ ಘಟನೆ ಚಟ್ಟಂಚಾಲ್ ಬಳಿ ನಡೆದಿದೆ.

ಚಟ್ಟಂಚಾಲ್ ಮದೀನಾ ಮರದ ಗಿರಣಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಸುಳ್ಯ ನಿವಾಸಿಗಳಾದ ಐವರು ಕಾರಿನಲ್ಲಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಊರಿಗೆ ಹಿಂತಿರುಗು ತ್ತಿದ್ದ ದಾರಿ ಮಧ್ಯೆ ಕಾರು ಚಟ್ಟಂಚಾಲ್‌ಗೆ ತಲುಪಿದಾಗ ಆ ದಾರಿಯಾಗಿ ಬರುತ್ತಿದ್ದ ಸ್ಕೂಟರೊಂದಕ್ಕೆ ಸೈಡ್ ಕೊಡಲೆತ್ನಿಸಿದ ವೇಳೆ ಕಾರು ರಾಷ್ಟ್ರೀಯ ಹೆದ್ದಾರಿ ನಡುವಿನ ಹೊಂಡದಲ್ಲಿ ಸಿಲುಕಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದನ್ನು ಕಂಡ ಊರವರು ತಕ್ಷಣ ಓಡಿ ಬಂದು ಗಂಭೀರ ಗಾಯಗೊಂಡ ಕಾರಿನಲ್ಲಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು. ವಿಷಯ ತಿಳಿದ ಮೇಲ್ಪರಂಬ ಪೊಲೀಸರು ಸ್ಥಳಕ್ಕೆ ಆಗಮಿಸಿ, ಕ್ರೈನ್ ಸಹಾಯದಿಂದ ಕಾರನ್ನು ಎತ್ತಿ ಠಾಣೆಗೆ ಸಾಗಿಸಿದ್ದಾರೆ.

ಇಲ್ಲೇ ಪಕ್ಕದ ಮೈಲಾಟಿಯಲ್ಲಿ ಮೊನ್ನೆ ಕೆಎಸ್‌ಆರ್‌ಟಿಸಿ ಬಸ್ ಶಾಲಾ ಬಸ್ಸಿಗೆ ಢಿಕ್ಕಿ ಹೊಡೆದು ಶಾಲಾ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಗಾಯಗೊಂಡ ಘಟನೆಯೂ ನಡೆದಿತ್ತು. ಅದರ ಬೆನ್ನಲ್ಲೇ ನಿನ್ನೆ ಈ ಅಪಘಾತ ನಡೆದಿದೆ.

You cannot copy contents of this page