ರೇಶನ್ ಅಂಗಡಿ ಖಾಲಿ: ಯೂತ್ ಲೀಗ್‌ನಿಂದ ಸರಕಾರದ ವಿರುದ್ಧ ನಿಂತು ಪ್ರತಿಭಟನೆ
ಮಂಜೇಶ್ವರ: ರೇಶನ್ ವಿತರಣೆಗಾರರು ನಡೆಸುವ ಮುಷ್ಕರದಿಂದಾಗಿ ರೇಶನ್ ಅಂಗಡಿಗಳಲ್ಲಿ ಆಹಾರ ಧಾನ್ಯಗಳು ಲಭಿಸದೆ ಬಡವರು ಸಂಕಷ್ಟಪಡುತ್ತಿ ದ್ದಾರೆಂದು ಆರೋಪಿಸಿ ಯೂತ್ ಲೀಗ್ ರಾಜ್ಯ ಘಟಕದ ನಿರ್ದೇಶದಂತೆ ಮಂಜೇಶ್ವರ ಪಂಚಾಯತ್ ಯೂತ್ ಲೀಗ್ ವತಿಯಿಂದ ರೇಶನ್ ಅಂಗ ಡಿಗಳ ಎದುರಲ್ಲಿ ನಿಂತು ಪ್ರತಿಭಟಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು ರೇಶನ್ ವಿತರಣೆಗಾರರಿಗೆ ನೀಡಲು ಹಣವಿಲ್ಲದ ಸರಕಾರ ಮಂತ್ರಿಗಳಿಗೆ ಹೊಸ ಕಾರು ಖರೀದಿಸಲು ಹಾಗೂ ಕೊಲೆ ಆರೋಪಿಗಳಾದ ತಮ್ಮ ಪಕ್ಷದವರನ್ನು ರಕ್ಷಿಸಲು ಕೋಟ್ಯಂತರ ರೂಪಾಯಿ ಖಜಾನೆಯಿಂದ ವೆಚ್ಚ ಮಾಡುತ್ತಿದೆಯೆಂದು ಆರೋಪಿಸಿದರು. ಬಡವರಾದ ರೇಶನ್ ವಿತರಣೆಗಾರರಿಗೆ 100 ಕೋಟಿ ರೂ. ನೀಡಲು ಬಾಕಿಯಿದ್ದು, ಜನಸಾಮಾನ್ಯರಿಗೆ 4 ತಿಂಗಳಿಂದ ಪಿಂಚಣಿಯು ಲಭಿಸುತ್ತಿಲ್ಲ. ಎಲ್ಲಾ ವಿಧಧ ತೆರಿಗೆಗಳನ್ನು ಹೆಚ್ಚಿಸಿದ ಸರಕಾರದ ನೀತಿಯಿಂದ ಬೆಲೆಯೇರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಲೆ ನಿಯಂತ್ರಿಸಬೇಕಾದ ಸರಕಾರ ವಿಪಕ್ಷದವರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿ ಬಾಯಿಮುಚ್ಚುವ ಪ್ರಯತ್ನ ನಡೆಸುತ್ತಿರುವುದಾಗಿ ಆರೋಪಿಸಿದೆ. ಯೂತ್ ಲೀಗ್ ಪಂಚಾಯತ್ ಅಧ್ಯಕ್ಷ ಹನೀಫ್ ಕುಚ್ಚಿಕ್ಕಾಡ್ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಪಂಚಾಯತ್ ಸಮಿತಿ ಅಧ್ಯಕ್ಷ ಅಜೀಜ್ ಹಾಜಿ ಉದ್ಘಾಟಿಸಿದರು.