ರೈಲುಗಳಿಗೆ ಕಲ್ಲು ತೂರಾಟ: ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಡಿಜಿಪಿ ನಿರ್ದೇಶ
ಕಾಸರಗೋಡು: ರಾಜ್ಯದಲ್ಲಿ ರೈಲುಗಳಿಗೆ ಇತ್ತೀಚೆಗಿನಿಂದ ವ್ಯಾಪಕವಾಗಿ ಕಲ್ಲು ತೂರಾಟ ನಡೆಸುವುದನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ತಡೆಗಟ್ಟಲು ಕಠಿಣ ಕ್ರಮ ಜರಗಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಡಾ. ಶೇಖ್ ದರ್ಬೇಶ್ ಸಾಹಿಬ್ ರಾಜ್ಯದ ಎಲ್ಲಾ ಜಿಲ್ಲೆಗಳ ವರಿಷ್ಠ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶ ನೀಡಿದ್ದಾರೆ.
ಈ ನಿರ್ದೇಶವನ್ನು ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ಕಚೇರಿಗಳಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಗಳ ನೇರ ನೇತೃತ್ವದಲ್ಲೇ ಸಮಗ್ರ ತನಿಖೆ ನಡೆಸಬೇಕು.
ಅಕ್ರಮಿಗಳನ್ನು ಪತ್ತೆಹಚ್ಚಲು ರೈಲುಗಳಿಗೆ ಕಲ್ಲು ತೂರಾಟ ನಡೆದ ಪ್ರದೇಶಗಳ ಸಮೀಪದ ಮನೆಗಳಲ್ಲಿ ಸಿಸಿ ಟಿವಿಗಳಿದ್ದಲ್ಲಿ ಅದನ್ನು ಸಮಗ್ರವಾದ ರೀತಿಯಲ್ಲಿ ಪರಿಶೀಲಿಸಬೇಕು. ಮಾತ್ರವಲ್ಲ ರೈಲು ಹಳಿಗಳ ಸಮೀಪದ ರಸ್ತೆಗಳ ಸಿಸಿಟಿವಿಗಳನ್ನು ಪರಿಶೀಲಿಸಬೇಕು. ಅದರಲ್ಲಿ ಅಕ್ರಮಿಗಳ ಬಗ್ಗೆ ಸುಳಿವು ಲಭಿಸಿದಲ್ಲಿ ಅದರ ಜಾಡು ಹಿಡಿದು ಅವರನ್ನು ಸೆರೆ ಹಿಡಿದು ಅವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ರೈಲು ಹಳಿಗಳನ್ನು ಪೊಲೀಸರು ಪದೇ ಪದೇ ತಪಾಸಣೆಗೊಳಪಡಿಸಬೇಕು. ರೈಲು ಹಳಿಗಳ ಮತ್ತು ರೈಲು ನಿಲ್ದಾಣಗಳು ಹಾಗೂ ಪರಸರ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ತಿರುಗುವ ಕ್ರಮ ಏರ್ಪಡಿಸಬೇಕು. ರಾತ್ರಿ ವೇಳೆಗಳಲ್ಲಿ ಹೆಚ್ಚಿನ ನಿಗಾ ಇರಿಸಬೇಕು.
ರೈಲುಗಳಿಗೆ ಕಲ್ಲು ತೂರಾಟ ನಡೆಯುತ್ತಿರುವುದನ್ನು ತಡೆಗಟ್ಟಲು ಸಾರ್ವಜನಿಕರ ಸಹಾಯವನ್ನು ಪಡೆಯಬೇಕು. ಕಲ್ಲುತೂರಾಟ ನಡೆಯುತ್ತಿರುವ ಪ್ರದೇಶ ಜನರನ್ನು ಒಳಪಡಿಸಿ ವಿಶೇಷ ಸಮಿತಿಗಳಿಗೂ ರೂಪು ನೀಡಬೇಕು. ಆ ಮೂಲಕ ಜನರ ಪಾಲುದಾರಿಕೆಯನ್ನು ತನಿಖೆಗಾಗಿ ಬಳಸಬೇಕೆಂದು ಡಿಜಿಪಿಯವರು ನೀಡಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ರೈಲ್ವೇ ಭದ್ರತಾಪಡೆ ಮತ್ತು ರೈಲ್ವೇ ಪೊಲೀಸರ ಸಹಾಯವನ್ನು ಇದಕ್ಕಾಗಿ ಪ್ರಯೋಜನಪಡಿಸಬೇಕೆಂದು ಡಿಜಿಪಿ ತಿಳಿಸಿದ್ದಾರೆ.