ರೋಡ್ ರೋಲರ್ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಕಾರು: ಓರ್ವ ಮೃತ್ಯು, ಇನ್ನೋರ್ವ ಗಂಭೀರ
ಕಾಸರಗೋಡು: ರೋಡ್‌ರೋಲರ್‌ನ ಹಿಂಭಾಗಕ್ಕೆ ಕಾರು ಢಿಕ್ಕಿಹೊಡೆದು ಓರ್ವ ಮೃತಪಟ್ಟ ಘಟನೆ ನಡೆದಿದ್ದು, ಸಹ ಪ್ರಯಾಣಿಕ ಗಾಯಗೊಂಡಿದ್ದಾರೆ. ಢಿಕ್ಕಿಯ ಆಘಾತಕ್ಕೆ ಕಾರಿನ ಮುಂಭಾಗ ಹಾನಿಗೊಂಡು 50 ಮೀಟರ್‌ನಷ್ಟು ಹಿಂದಕ್ಕೆ ಚಲಿಸಿ ಕಾರು ನಿಂತಿದೆ. ಮಲಪ್ಪುರಂ ತಿರುರಂಗಾಡಿ ಮಂಬರದ ಕುಂಞಾಲಿ ಹಾಜಿಯವರ ಪುತ್ರ ಮೆಹಬೂಬ್ (32) ಮೃತಪಟ್ಟವರು. ಗಂಭೀರ ಗಾಯಗೊಂಡ ಸಹ ಪ್ರಯಾಣಿಕನನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ಮೊಗ್ರಾಲ್ ಪುತ್ತೂರು ರಾಷ್ಟ್ರೀಯ ಹೆದ್ದಾರಿ ಕಲ್ಲಂಗೈಯಲ್ಲಿ ಧಾರುಣ ಅಪಘಾತ ಸಂಭವಿಸಿದೆ.
ಮಂಗಳೂರು ಭಾಗದಿಂದ ಆಗಮಿಸುತ್ತಿದ್ದ ಕಾರು ಮುಂಭಾಗದಲ್ಲಿ ಚಲಿಸುತ್ತಿದ್ದ ರೋಡ್ ರೋಲರ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಕೂಡಲೇ ಕಾರಿನಲ್ಲಿದ್ದ ಇಬ್ಬರನ್ನು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾ ಯಿತಾದರೂ ಮೆಹಬೂಬ್ ಆ ವೇಳೆ ಮೃತಪಟ್ಟಿದ್ದರು. ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತ ಯುವಕ ತಂದೆ, ತಾಯಿ ಸೈನಬ, ಪತ್ನಿ ಉಮ್ಮು ಸಲ್ಮ, ಸಹೋದರರಾದ ಹಾರಿಸ್, ಸಾದಿಕ್, ಸಾಲಿ, ಸಹೋದರಿ ಸಾಬಿರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.