ವಕ್ಫ್ (ತಿದ್ದುಪಡಿ) ಮಸೂದೆ ಸಂಸತ್‌ನಲ್ಲಿ ಮಂಡನೆ

ನವದೆಹಲಿ: ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಸಚಿವ ಕಿರಣ್ ರಿಜುಜಿ ಇಂದು ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಯ ಮೇಲಿನ ಚರ್ಚೆಗಾಗಿ ಲೋಕಸಭಾಧ್ಯಕ್ಷರು ಎಂಟು ತಾಸುಗಳ ಸಮಯಾವಕಾಶ ನೀಡಿದ್ದಾರೆ. ರಾಜ್ಯ ಸಭೆಯಲ್ಲಿ ನಾಳೆ ಈ ವಿಷಯ ಚರ್ಚೆಗೆ ಬರಲಿದೆ.

ಲೋಕಸಭೆಯಲ್ಲಿ ಆರಾಮದಾಯಕ ಬಹುಮತ ಹೊಂದಿರುವ  ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಎಲ್ಲಾ ಸದಸ್ಯರಿಗೂ ಈ ವೇಳೆ ಕಡ್ಡಾಯವಾಗಿ ಸಂಸತ್‌ನಲ್ಲಿ ಹಾಜರಿರಬೇಕೆಂದು  ನಿರ್ದೇಶಿಸಿ ವಿಪ್ ಜ್ಯಾರಿಗೊಳಿಸಿದೆ. ಎನ್‌ಡಿಎಯ ಪ್ರಮುಖ ಮಿತ್ರ ಪಕ್ಷಗಳಾದ  ತೆಲುಗುದೇಶಂ (ಟಿಡಿಪಿ), ಜನತಾದಳ ಯುನೈಟೆಡ್, ಶಿವಸೇನೆ ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಸಹ ತಮ್ಮ ಸದಸ್ಯರಿಗೆ ಸರಕಾರವನ್ನು  ಬೆಂಬಲಿಸುವಂತೆ ಇನ್ನೊಂದೆಡೆ ನಿರ್ದೇಶ ನೀಡಿದೆ. ಇದರಿಂದಾಗಿ  ವಕ್ಫ್ ಮಸೂದೆಗೆ ಸಂಸತ್‌ನ ಅಂಗೀಕಾರ ಲಭಿಸುವುದಂತೂ ಬಹುತೇಕ ಪಕ್ಕಾಗೊಂಡಂತಾಗಿದೆ.

ಇನ್ನೊಂದೆಡೆ ಈ ಮಸೂದೆ ತೀವ್ರ ರಾಜಕೀಯ ಚರ್ಚೆಗೂ ನಾಂದಿ ಹಾಡಿದ್ದು, ವಿರೋಧಪಕ್ಷಗಳು ಈ ಮಸೂದೆ ವಿರುದ್ಧ ಒಗ್ಗೂಡಿ ಮಸೂದೆಯನ್ನು ಅಸಂವಿಧಾನಿಕ ಎಂದು ಕರೆದು ಅದರ ವಿರುದ್ಧ ಸಂಸತ್‌ನಲ್ಲಿ ಹೋರಾಟಕ್ಕೂ ಮುಂದಾಗಿದೆ.  ಬಿಜೆಪಿ ಮಾತ್ರವಲ್ಲ  ಕಾಂಗ್ರೆಸ್ ಕೂಡಾ ತನ್ನ ಸದಸ್ಯರಿಗೆ ವಿಪ್ ಜ್ಯಾರಿಗೊಳಿಸಿದೆ. ಆಡಳಿತಾರೂಢ ಎನ್‌ಡಿಎಯ ಕೆಲವು ಮಿತ್ರ ಪಕ್ಷಗಳ ಸದಸ್ಯರು ಈ ಹಿಂದೆ ಈ ಮಸೂದೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಂಸದೀಯ ಸಮಿತಿಯು ತಮ್ಮ ಕೆಲವು ಸಲಹೆಗಳನ್ನು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ನಂತರ ಅವರು ತಮ್ಮ ನಿಲುವನ್ನು ಮೃದುಗೊಳಿಸಿದ್ದಾರೆ.

 ಆದರೆ ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೇರಳ ಘಟಕದ ಸಂಸದರು ಈ ಮಸೂದೆ ವಿಷಯದಲ್ಲಿ ತಳೆಯುವ ನಿಲುವು ಅವರ ಮುಂದಿನ ರಾಜಕೀಯ ಭವಿಷ್ಯದ ವಿಷಯದಲ್ಲಿ ಅತೀ ನಿರ್ಣಾಯಕವಾಗಲಿದೆ. ಏಕೆಂದರೆ ವಕ್ಫ್ ಮಸೂದೆಗೆ ಅನುಕೂಲಕರ ನಿಲುವು ತಳೆಯಬೇಕೆಂದೂ ಇಲ್ಲವಾದಲ್ಲಿ ನಾವು ನಮ್ಮದೇ ಆದ ನಿಲುವನ್ನು ಈ ವಿಷಯದಲ್ಲಿ ಮುಂದೆ ತಳೆಯಬೇಕಾಗಿ ಬರಲಿದೆಯೆಂದು ಕೇರಳದ ಕ್ರೈಸ್ತ ಪರ ಒಕ್ಕೂಟ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page