ವರ್ಕಾಡಿ ಪಂ.ನ ವಿವಿಧೆಡೆ ತ್ಯಾಜ್ಯ ಉಪೇಕ್ಷೆ : ಸಂಸ್ಥೆಗಳಿಂದ ದಂಡ ವಸೂಲಿ
ವರ್ಕಾಡಿ: ಹೊಸಂಗಡಿ- ವಿಟ್ಲ ಅಂತಾರಾಜ್ಯ ರಸ್ತೆ ಬದಿಯ ಮಜೀರ್ಪಳ್ಳ ಪೇಟೆಯಲ್ಲಿ ಅಂಗಡಿಗಳ ತ್ಯಾಜ್ಯವನ್ನು ರಾಶಿ ಹಾಕಿ ಹಲವು ಕಾಲಗಳಿಂದ ಕಿಚ್ಚಿರಿಸುತ್ತಿದ್ದ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತನಿಖೆಯಲ್ಲಿ ಕಾನೂನು ಉಲ್ಲಂಘನೆ ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ದಂಡ ಹೇರಲಾಗಿದೆ. ಉರಿಯುತ್ತಿದ್ದ ತ್ಯಾಜ್ಯಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಮಜೀರ್ಪಳ್ಳ ಸುಂಕದಕಟ್ಟೆಯ ಎಂಟರ್‌ಪ್ರೈಸಸ್, ಫ್ಯಾಶನ್ ಟೆಕ್ಸ್‌ಟೈಲ್ಸ್, ಕಾಂಪ್ಲೆಕ್ಸ್ ಎಂಬೀ ಸಂಸ್ಥೆಗಳಿಗೆ 15,೦೦೦ ರೂ.ನಂತೆ ದಂಡ ಹೇರಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ವ್ಯಾಪಕವಾಗಿ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವುದಾಗಿಯೂ ಮಾಹಿತಿ ಲಭಿಸಿದೆ.
ಸುಂಕದಕಟ್ಟೆ ಗಾಂಧಿನಗರದ ಆಟೋ ವರ್ಕ್‌ಶಾಪ್‌ನಿಂದ ವಯರ್‌ಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉರಿಸುತ್ತಿರುವುದು ನೇರವಾಗಿ ಕಂಡ ಹಿನ್ನೆಲೆಯಲ್ಲಿ ಅಂಗಡಿ ಮಾಲಕನಿಗೆ 5೦೦೦ ರೂ. ತಕ್ಷಣ ದಂಡ ವಿಧಿಸಲಾಗಿದೆ. ವರ್ಕಾಡಿ ಕೃಷಿ ಭವನದ ಸಮೀಪವಿರುವ ಚರಂಡಿಗೆ ಸಮೀಪದ ಮನೆಯಿಂದ ಉಪಯೋಗಶೂನ್ಯ ಜಲವನ್ನು ಹರಿಯಬಿಟ್ಟು ಮಲಿನಗೊಳಿಸಿ ಸೊಳ್ಳೆ ಉತ್ಪತ್ತಿಗೆ ಕಾರಣವಾದ ಹಿನ್ನೆಲೆಯಲ್ಲಿ ಮನೆಮಾಲಕನಿಗೆ ಪಂಚಾಯತ್‌ರಾಜ್ ಆಕ್ಟ್ 216 ಕೆ ಪ್ರಕಾರ 1೦,೦೦೦ ರೂ. ದಂಡ ವಿಧಿಸಿದ್ದು, ಒಂದು ವಾರದೊಳಗೆ ಮಲಿನ ಜಲವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವ ವ್ಯವಸ್ಥೆ ಕೈಗೊಳ್ಳಲು ನಿರ್ದೇಶಿಸಲಾಯಿತು. ವರ್ಕಾಡಿ ಪಂಚಾಯತ್ ತಲೆಕ್ಕಿಯಲ್ಲಿರುವ ವ್ಯಾಪಾರ ಕಾಂಪ್ಲೆಕ್ಸ್‌ನಲ್ಲಿ ವ್ಯಾಪಾರ ಸಂಸ್ಥೆ ಹಾಗೂ ಪರಿಸರ ತ್ಯಾಜ್ಯಮುಕ್ತವಾಗಿ ಸಂರಕ್ಷಿಸಲು, ಕ್ಷೌರದಂಗಡಿ, ಸ್ಟೋರ್, ಹೋಟೆಲ್, ಜನರಲ್ ಸ್ಟೋರ್ ಎಂಬೀ ಅಂಗಡಿಗಳಿಗೂ ದಂಡ ಹೇರಲಾಯಿತು. ತಂಡದಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮುಹಮ್ಮದ್ ಮದನಿ, ಹೆಲ್ತ್ ಇನ್ಸ್‌ಪೆಕ್ಟರ್ ಜಾಸ್ಮಿನ್ ಪಿ.ಕೆ, ಫಾಸಿಲ್ ಇ.ಕೆ. ನೇತೃತ್ವ ನೀಡಿದರು.