ವಾಮಂಜೂರು ಚೆಕ್ ಪೋಸ್ಟ್ ಬಳಿ ಭೀಕರ ಕಾರು ಅಪಘಾತ: ತಂದೆ, ಮಗ ಸಹಿತ ಮೂವರು ಮೃತ್ಯು: ಓರ್ವ ಗಂಭೀರ
ಉಪ್ಪಳ: ವಾಮಂಜೂರು ಚೆಕ್‌ಪೋಸ್ಟ್ ಬಳಿ ಸೇತುವೆ ಮೇಲೆ ನಿನ್ನೆ ರಾತ್ರಿ ಕಾರು ಅಪಘಾತಕ್ಕೀಡಾಗಿ ತಂದೆ, ಮಗ ಸಹಿತ ಮೂರು ಮಂದಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಮೂಲತಃ ಚೆರುಗೋಳಿ ತೋಟ ನಿವಾಸಿಯೂ ಪ್ರಸ್ತುತ ಮೀಂಜ ಪಂಚಾಯತ್ ವ್ಯಾಪ್ತಿಯ ಮಂಜಲ್ತೋಡಿಯಲ್ಲಿ ವಾಸಿಸುವ ಜನಾರ್ದನ (58), ಪುತ್ರ ಅರುಣ್ (28), ಹೊಸಂಗಡಿ ಬಳಿಯ ಬಲ್ಲಂಗುಡೇಲುವಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ದಿ| ಭೂಪತಿ ಎಂಬವರ ಪುತ್ರ ಕೃಷ್ಣ ಯಾನೆ ಕಿಶನ್ ಕುಮಾರ್ (32) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕರ್ನಾಟಕದ ಉಪ್ಪಿನಂಗಡಿ ನಿವಾಸಿ ರತನ್ (30) ಎಂಬವರು ಗಂಭೀರ ಗಾಯಗೊಂ ಡಿದ್ದು, ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ಸುಮಾರು 10 ಗಂಟೆ ವೇಳೆ ಈ ಭೀಕರ ಅಪಘಾತ ಸಂಭ ವಿಸಿದೆ. ಈ ನಾಲ್ಕು ಮಂದಿ ಕಾರಿನಲ್ಲಿ ಬಾಯಿಕಟ್ಟೆ ಭಾಗದಿಂದ ಹೊಸಂಗಡಿ ಭಾಗಕ್ಕೆ ಕೈಕಂಬ ಮೂಲಕ ತೆರಳುತ್ತಿದ್ದಾಗ ಅಪಘಾತವುಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ವಾಮಂಜೂರು ಚೆಕ್‌ಪೋಸ್ಟ್ ಬಳಿಯ ಸೇತುವೆ ಮೇಲೆ ಸಂಚರಿಸುತ್ತಿದ್ದಂತೆ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಬಳಿಕ ಸೇತುವೆಯ ಬದಿಗೆ ಬಡಿದಿರುವುದೇ ಅಪಘಾತ ಇಷ್ಟು ಭೀಕರವಾಗಲು ಕಾರಣವೆ ನ್ನಲಾಗಿದೆ. ಅಪಘಾತದಲ್ಲಿ ಕಾರು ಪೂರ್ಣ ನಜ್ಜುಗುಜ್ಜಾಗಿದ್ದು, ಸುಮಾರು ೨೦ ಮೀಟರ್ ವ್ಯಾಪ್ತಿಯಲ್ಲಿ ಬಿಡಿಭಾಗಗಳು ಚದುರಲ್ಪಟ್ಟಿದೆ.
ಮೃತಪಟ್ಟ ಕಿಶನ್ ಕುಮಾರ್ ಚಾಲಕ ವೃತ್ತಿ ನಡೆಸುತ್ತಿದ್ದು, ಇವರನ್ನು ಕೆಲಸದ ಅಗತ್ಯಕ್ಕಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಈ ಅಪಘಾತವುಂಟಾಗಿದೆಯೆಂದು ಹೇಳಲಾಗುತ್ತಿದೆ.
ಅಪಘಾತ ಸಂಭವಿಸಿದಾಕ್ಷಣ ಸೇರಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂ ಡರು. ಘಟನೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆನ್ನಲಾಗಿದೆ. ಮೃತದೇಹಗಳನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಇರಿಸಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆಯಲಿದೆ.
ದಿವಂಗತರಾದ ಕಣ್ಣಪ್ಪ-ರಾಜೀವಿ ದಂಪತಿಯ ಪುತ್ರನಾದ ಮೃತ ಜನಾರ್ದನ ಪತ್ನಿ ವನಜ, ಮಕ್ಕಳಾದ ಕಿರಣ್, ನಿರೀಕ್ಷಾ, ಸಹೋದರ-ಸಹೋದರಿಯರಾದ ಕೇಶವ, ಪ್ರಕಾಶ, ಶಾಂಭವಿ, ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಅದೇ ರೀತಿ ಮೃತ ಕೃಷ್ಣ ಯಾನೆ ಕಿಶನ್ ಕುಮಾರ್ ತಾಯಿ ಕೃಷ್ಣ ಕುಮಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಈ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.