ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಅನಿವಾಸಿ ಕೇರಳೀಯ ಮೃತ್ಯು
ಕಾಸರಗೋಡು: ಸ್ಕೂಟರ್ ಮತ್ತು ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಕಲ್ಲಿಕೋಟೆ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದ ಅನಿವಾಸಿ ಕೇರಳೀಯ ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನ ಬಳಿಯ ಶಿವಕೃಪಾ ನಿವಾಸಿ ಕೆ. ಶ್ರೀಧರ ಅರಳಿತ್ತಾಯ (೫೧) ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಶ್ರೀಧರನವರು ಕಳೆದ ಆದಿತ್ಯವಾರ ಬೆಳಿಗ್ಗೆ ತಳಿಪರಂಬದಿಂದ ಬೈಕ್ನಲ್ಲಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ವೆಳ್ಳೂರು ಕಣಿಯೇರಿ ಮುತ್ತಪ್ಪನ್ ಕ್ಷೇತ್ರದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ಗೆ ಕಾರು ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಶ್ರೀಧರರನ್ನು ಮೊದಲು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೂ, ನಂತರ ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಗೆ ಒಯ್ದು ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ನಿನ್ನೆ ಮೃತಪಟ್ಟರು.
ವರ್ಷಗಳ ಕಾಲ ವಿದೇಶದಲ್ಲಿ ದುಡಿದಿದ್ದ ಶ್ರೀಧರನ್ರು ನಂತರ ಆ ಕೆಲಸವನ್ನು ಬಿಟ್ಟು ಊರಿಗೆ ಹಿಂತಿರುಗಿ ದ್ದರು. ಅವರು ಈ ಹಿಂದೆ ದೇವಸ್ಥಾನ ಗಳಲ್ಲಿ ಅರ್ಚಕರಾಗಿಯೂ ಸೇವೆ ಸಲ್ಲಿಸಿ ದ್ದರು. ವಿದೇಶದ ಕೆಲಸ ಕೊನೆಗೊಳಿಸಿ ಊರಿಗೆ ಹಿಂತಿರುಗಿದ ಅವರು ಸಮಾರಂಭಗಳಿಗೆ ಔತಣ ಒದಗಿಸುವ ಗುತ್ತಿಗೆ ದಾರರಾಗಿ ಸೇವೆ ಆರಂಭಿಸಿದ್ದರು.
ಮೃತರು ಬಿಜೆಪಿಯ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್ರ ಸಹೋದರರೂ ಆಗಿದ್ದಾರೆ. ಇವರ ಇನ್ನೋರ್ವ ಸಹೋ ದg ಕೆ. ವೆಂಕಟೇಶ್ ಅರಳಿತ್ತಾಯ ಕಳೆದ ವರ್ಷ ಹೊಸದುರ್ಗ ಅಲಾಮಿಪಳ್ಳಿ ಬಳಿ ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದಾದ ಒಂದು ವರ್ಷದ ಬಳಿಕ ಇನ್ನೋರ್ವ ಸಹೋದರನೂ ಈಗ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದು, ಅದು ಆ ಕುಟುಂಬವನ್ನು ಮಾತ್ರವಲ್ಲದೆ ಇಡೀ ಊರನ್ನೇ ತೀವ್ರ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.
ದಿ| ವಾಸುದೇವ ಅರಳಿತ್ತಾಯ- ಯಶೋಧ ದಂಪತಿ ಪುತ್ರರಾಗಿರುವ ಮೃತ ಶ್ರೀಧರರು ಪತ್ನಿ ಜಿ.ಎನ್. ರೇಖಾ (ಕಾಲೇಜು ಪ್ರಾಧ್ಯಾಪಿಕೆ, ಮಂಗಳೂರು), ಪುತ್ರ ಕೆ. ಸ್ವಾಗತ್ (ವಿದ್ಯಾರ್ಥಿ), ಇನ್ನೋರ್ವ ಸಹೋದರ ಗಣೇಶ್ ಅರಳಿತ್ತಾಯ, ಸಹೋದರಿ ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.