ವಿದ್ಯಾರ್ಥಿಗಳಿಗೆ ಗಾಂಜಾ ವಿತರಿಸಿದ ಆರೋಪಿ ‘ಕಾಪಾ’ ಪ್ರಕಾರ ಬಂಧನ
ಕಾಸರಗೋಡು: ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವೇಳೆ ಅವರಿಗೆ ಗಾಂಜಾ ಪೂರೈಸಿದ ಪ್ರಕರಣ ಸೇರಿದಂತೆ ಇತರ ಹಲವು ಪ್ರಕರಣಗಳ ಆರೋಪಿಯ ಮೇಲೆ ಕಾಪಾ ಕಾನೂನು ಹೇರಿ ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
ಕಳನಾಡು ಕೆ.ಕೆ. ಸಮೀರ್ (34) ಬಂಧಿತ ಆರೋಪಿ. ಆತನನ್ನು ನಂತರ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿ ಕೂಡಿಹಾಕಲಾಗಿದೆ. ಕಾಸರಗೋಡಿನ ಶಾಲೆಯೊಂದರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವೇಳೆ ಗಾಂಜಾ ಸೇವಿಸಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಅವರನ್ನು ವಿಚಾರಿಸಿದಾಗ ತಮಗೆ ಗಾಂಜಾ ನೀಡಿದ್ದು ಸಮೀರ್ ಆಗಿರುವುದಾಗಿ ವಿದ್ಯಾರ್ಥಿಗಳು ಪೊಲೀಸರಲ್ಲಿ ಹೇಳಿಕೆ ನೀಡಿದ್ದರು. ಅದರಂತೆ ಸಮೀರ್‌ನನ್ನು ಸೆರೆಹಿಡಿಯಲು ಪೊಲೀಸರು ಹೋದಾಗ ಆತ ಪೊಲೀಸರ ಮೇಲೆ ದಾಳಿ ನಡೆಸಿ ಅಲ್ಲಿಂದ ತಪ್ಪಿಸಿಕೊಂಡಿದ್ದನು. ಆತನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕಾಸರಗೋಡು, ಮೇಲ್ಪರಂಬ, ಬೇಕಲ, ಹೊಸದುರ್ಗ ಮತ್ತು ಅಂಬಲತರ ಪೊಲೀಸ್ ಠಾಣೆಗಳ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಈತ 2022ರಿಂದ ಮಾದಕ ದ್ರವ್ಯ ವಸ್ತುಗಳ ವಿತರಣೆ ಆರಂಭಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಅಮಲು ಪದಾರ್ಥ ಕೈವಶವಿರಿಸುವಿಕೆ, ಮಾರಾಟ, ಸೇವನೆ, ಮಕ್ಕಳು ಸೇರಿ ಇತರರಿಗೆ ಮಾದಕದ್ರವ್ಯ ವಿತರಣೆ, ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡಚಣೆ ಮತ್ತು ಹಲ್ಲೆ ಇತ್ಯಾದಿ ಪ್ರಕರಣಗಳಲ್ಲಿ ಈತ ಆರೋಪಿಯಾಗಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಮಾದಕದ್ರವ್ಯ ಸಾಗಾಟ ಪ್ರಕರಣಗಳಲ್ಲಿ ಆರೋಪಿಯಾಗುವವರ ಮೇಲೆ ಕಾಪಾ ಕಾನೂನು ಪ್ರಕಾರ ಕೇಸು ದಾಖಲಿಸಿ ಅವರನ್ನು ಜೈಲಿಗಟ್ಟುವ ಕ್ರಮ ಈಗ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.