ವಿವಿಧೆಡೆ ಮುಂದುವರಿದ ಚಿರತೆ ಭೀತಿ : ಮುಳ್ಳೇರಿಯ ಬಳಿ ಮತ್ತೆ ಚಿರತೆ ಪ್ರತ್ಯಕ್ಷ

ಮುಳ್ಳೇರಿಯ; ಕಾರಡ್ಕ ಹಾಗೂ ಮುಳಿಯಾರು ಪಂಚಾಯತ್‌ಗಳ ವಿವಿಧೆಡೆ ಕಂಡುಬಂದ ಚಿರತೆಗಳನ್ನು ಪತ್ತೆಹಚ್ಚಲು  ಸಾಧ್ಯವಾಗದೆ ಇರುವುದು ಹಾಗೂ ಚಿರತೆಗಳು ಮತ್ತೆ ಮತ್ತೆ ಜನರ ಮುಂದೆ ಓಡಿ ಹೋಗುತ್ತಿರುವುದರಿಂದ ಆತಂಕ ಮತ್ತಷ್ಟು ಹೆಚ್ಚಿದೆ.  ಮುಳಿ ಯಾರು ಪಂ. ವ್ಯಾಪ್ತಿಯ ವಿವಿಧೆಡೆ ಬೋನು ಇರಿಸಿದ್ದರೂ ಅದಕ್ಕೆ ಚಿರತೆ ಬೀಳದೇ ಇರುವುದು  ಅರಣ್ಯಾಧಿಕಾರಿಗಳಿಗೂ ತೀವ್ರ ಸವಾಲಾಗಿ ಪರಿಣಮಿಸಿದೆ.

ಇದೇ ವೇಳೆ ಮುಳ್ಳೇರಿಯ ಬಳಿಯ ಪೂವಡ್ಕದಲ್ಲಿ ಸ್ಕೂಟರ್ ಸವಾರನ ಮುಂದೆ ಓಡಿ ಹೋಗಿರುವುದಾಗಿ  ಹೇಳಲಾಗುತ್ತಿದೆ. ರಸ್ತೆ ಬದಿ ಮರದ ಮೇಲಿದ್ದ  ಚಿರತೆ  ಸ್ಕೂಟರ್‌ನ ಮುಂದೆ ಜಿಗಿದು ಓಡಿದೆ. ಕರ್ಮಂತ್ತೋಡಿಯ ಸಿನಿಮಾ ಥಿಯೇಟರ್ ನೌಕರನಾದ ಗಿರೀಶ್ ಮುಳ್ಳೇರಿಯದಿಂದ ಮರಳಿ ಬರುತ್ತಿದ್ದಾಗ ಚಿರತೆ ಕಾಣಸಿಕೊಂಡಿದೆ. ಇದೇ ಸ್ಥಳದಲ್ಲಿ ಎರಡು ವಾರಗಳ ಹಿಂದೆ ಕೊಟ್ಟಂಗುಳಿಯ ಸುರೇಶ್ ಕುಮಾರ್ ಎಂಬವರ ವಾಹನದ ಮುಂದೆಯೂ ಚಿರತೆ ಓಡಿ  ಹೋಗಿತ್ತು. ಕೊಟ್ಟಂಗುಳಿಯಲ್ಲಿ ದಾಕ್ಷಾಯಿಣಿ ಎಂಬವರ ನಾಯಿಯನ್ನು ಚಿರತೆ ಕೊಂಡೊಯ್ಯುತ್ತಿರುವುದಾಗಿಯೂ ಹೇಳಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಮಡಿಕೈ ಪಂಚಾಯತ್‌ನಲ್ಲೂ ಕಳೆದ ಎರಡು ತಿಂಗಳಿಂದ ಚಿರತೆ ಭೀತಿ  ಹುಟ್ಟಿದೆ. ಮೊನ್ನೆ ರಾತ್ರಿ ಹಾಗೂ ನಿನ್ನೆ ಬೆಳಿಗ್ಗೆ ಪಂಚಾಯತ್‌ನ ವಿವಿಧೆಡೆ ಚಿರತೆ  ಕಾಣಿಸಿಕೊಂಡಿದೆಯೆಂದು ನಾಗರಿಕರು ತಿಳಿಸಿದ್ದಾರೆ.

ಮೊನ್ನೆ ರಾತ್ರಿ ಆಟೋ ರಿಕ್ಷಾದ ಮುಂದೆ ಚಿರತೆ ಕಾಣಿಸಿಕೊಂಡಿತ್ತು. ನಿನ್ನೆ ಬೆಳಿಗ್ಗೆ ಟ್ಯಾಪಿಂಗ್‌ಗೆ ತೆರಳುವ ಚಂದ್ರನ್ ಎಂಬವರಿಗೆ ಚಿರತೆ ಕಂಡು ಬಂದಿದೆ. ಚಿರತೆಗಳು ವಿವಿಧ ಕಡೆಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಸೆರೆಹಿಡಿಯಲು ಬೇಕಾದ ಕ್ರಮ ಕೈಗೊಳ್ಳುತ್ತಿಲ್ಲವೆಂಬ ದೂರು ಕೇಳಿಬರುತ್ತಿದೆ.

You cannot copy contents of this page