ಶಿಶು ಸೌಹಾರ್ದ ಚಟುವಟಿಕೆ :ವಿದ್ಯಾನಗರ ಠಾಣೆಗೆ ಅಂಗೀಕಾರ; ವಿಜಯನ್ ಮೇಲತ್, ಶೈಲಜಾ ಉತ್ತಮ ಪೊಲೀಸ್ ಅಧಿಕಾರಿಗಳು
ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ವರ್ಷ ಉತ್ತಮ ಶಿಶು ಸೌಹಾರ್ದ ಚಟುವಟಿಕೆ ನಡೆಸಿದ ಪೊಲೀಸ್ ಠಾಣೆಯಾದ ವಿದ್ಯಾನಗರ ಪೊಲೀಸ್ ಠಾಣೆಯನ್ನು ಹಾಗೂ ಶಿಶು ಸೌಹಾರ್ದ ಪೊಲೀಸ್ ಆಫೀಸರ್ ಆಗಿ ವಿದ್ಯಾನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಜಯನ್ ಮೇಲತ್, ಬೇಕಲ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಶೈಲಜಾ ಎಂಬಿವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಪೊಲೀಸ್ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಹೆಚ್ಚುವರಿ ಪೊಲೀಸ್ ಅಧಿಕಾರಿ ಪಿ. ಬಾಲಕೃಷ್ಣನ್ ನಾಯರ್ ಇವರಿಬ್ಬರನ್ನು ಅಭಿನಂದಿಸಿದರು.
ವಿದ್ಯಾನಗರ ಠಾಣೆ ವ್ಯಾಪ್ತಿಯ ದೀನ್‌ದಯಾಳ್ ಬಡ್ಸ್ ಶಾಲೆ, ಪ್ರಗತಿ ಸ್ಪೆಷಲ್ ಶಾಲೆ, ಆಶ್ರಿ ಸ್ಪೆಷಲ್ ಶಾಲೆ, ವಿದ್ಯಾನಗರ ಅಂಧ ವಿದ್ಯಾಲಯ, ಚೆರ್ಕಳ ಮಾರ್ತೋಮಾ ಕಿವುಡರ ವಿದ್ಯಾಲಯ ಎಂಬೀ ಶಾಲೆಗಳ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಬೇಕಾಗಿ ನಡೆಸಿದ ಚಟುವಟಿಕೆಗಳು, ಅಧ್ಯಯನ ಮೊಟಕುಗೊಳಿಸಿದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಶಾಲೆಗಳಿಗೆ ಮತ್ತೆ ಮರಳುವಂತೆ ನಡೆಸಿದ ಯತ್ನಗಳು, ಜೀವಕಾರುಣ್ಯ ಚಟುವಟಿಕೆಗಳಂಗವಾಗಿ ಬಡವರಾದ ವ್ಯಕ್ತಿಗಳಿಗೆ ವ್ಹೀಲ್ ಚೆಯರ್‌ಗಳನ್ನು ನೀಡಿರುವುದು, ಮಕ್ಕಳಲ್ಲಿನ ಮಾದಕ ಪದಾರ್ಥ ವ್ಯಾಪನೆಯನ್ನು ತಡೆಯಲು ತಿಳುವಳಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ವಿಜಯನ್ ಮೇಲತ್‌ರಿಗೆ ಈ ಪುರಸ್ಕಾರ ತಂದಿತ್ತಿದೆ.
ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ ಶಿಶು ಸೌಹಾರ್ದ ಪೊಲೀಸ್ ಚಟುವಟಿಕೆ ಹಿನ್ನೆಲೆಯಲ್ಲಿ ಶೈಲಜಾ ಅಭಿನಂದನೆಗೆ ಅರ್ಹರಾಗಿದ್ದಾರೆ.