ಸಿಗಬೇಕಾದ ಹಣ ಕೇಳಲು ಹೋದ ಗೃಹಿಣಿಗೆ ಗಂಭೀರ ಹಲ್ಲೆ
ಮುಳ್ಳೇರಿಯ: ಸಿಗಬೇಕಾದ ಹಣ ಕೇಳಲು ಹೋದ ಗೃಹಿಣಿಗೆ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಕೈಕಾಲುಗಳಲ್ಲಿ ಬಿರುಕು ಬಿಟ್ಟು ಗಂಭೀರ ಸ್ಥಿತಿಯಲ್ಲಿರುವ ಗೃಹಿಣಿಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಡೂರು ದೇವರಡ್ಕ ಒಡ್ಯನಡ್ಕದ ಸುಬ್ಬಮ್ಮ (೬೩) ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಒಡ್ಯನಡ್ಕದ ಸುಂದರನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಸುಬ್ಬಮ್ಮರ ನೆಯಿಂದ ಕಾಳುಮೆಣಸು ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಸುಂದರನ ಸಹೋದರ ಜಯರಾಮ ಕಳವು ನಡೆಸಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಎರಡು ಭಾರದವರು ನಡೆಸಿದ ಮಾತುಕತೆಯಂತೆ ಕಾಳುಮೆಣಸಿನ ಹಣ ನೀಡುವಂತೆ ಒಪ್ಪಂದವಾಗಿತ್ತು. ಆದರೆ ಹೇಳಿದ ಕಾಲಾವಧಿಯೊಳಗೆ ಹಣ ಲಭಿಸದುದರಿಂದ ಜಯರಾಮನಲ್ಲಿ ಹಣ ಕೇಳಲು ಹೋದಾಗ ಸುಂದರ ಹಲ್ಲೆಗೈದಿರುವುದಾಗಿ ಸುಬ್ಬಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.