ಸೇತುವೆಯಿಂದ ಹೊಳೆಗೆ ಹಾರಿದ ಯುವಕನ ಮೃತದೇಹ ಪತ್ತೆ
ಕಾಸರಗೋಡು: ಕಳೆದ ಶುಕ್ರವಾರ ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿ ನಾಪತ್ತೆಯಾದ ಯುವಕನ ಮೃತ ದೇಹ ನಿನ್ನೆ ಸಂಜೆ ಉಪ್ಪಳ ಮುಸೋಡಿ ಸಮುದ್ರ ಕಿನಾರೆ ಬಳಿ ಪತ್ತೆಯಾಗಿದೆ. ಕೂಡ್ಲು ಮೀಪುಗುರಿ ಶೆಟ್ಟಿಗದ್ದೆ ರಸ್ತೆಯ ಅನುಗ್ರಹ ನಿವಾಸದ ಗಿರೀಶ್ (45) ಎಂಬವರ ಮೃತದೇಹ ಪತ್ತೆಯಾಗಿದೆ. ಗ್ಯಾರೇಜ್ ಮಾಲಕನಾಗಿರುವ ಇವರು ಚಂದ್ರಗಿರಿ ಸೇತುವೆಯಲ್ಲಿ ಬೈಕ್ ನಿಲ್ಲಿಸಿ ಹೊಳೆಗೆ ಹಾರಿದ್ದರು. ಬೈಕ್ನಲ್ಲಿದ್ದ ದಾಖಲುಪತ್ರಗಳಿಂದ ಅವರ ಗುರುತು ಹಚ್ಚಲು ಸಾಧ್ಯವಾಗಿತ್ತು. ಇವರ ಪತ್ತೆಗಾಗಿ ಕಾಸರಗೋಡು ಅಗ್ನಿಶಾಮಕ ದಳ ಡಿಂಗಿ ಸಹಾಯದಿಂದ ಹೊಳೆಯಲ್ಲಿ ವ್ಯಾಪಕ ಶೋಧ ನಡೆಸಿದ್ದರೂ ಪ್ರಯೋಜನ ಉಂಟಾಗಿರಲಿಲ್ಲ. ಶೋಧ ಕಾರ್ಯಾ ಚರಣೆ ಮುಂದುವರಿಯುತ್ತಿದ್ದಂತೆಯೇ ನಿನ್ನೆ ಮುಸೋಡಿ ಸಮುದ್ರ ಕಿನಾರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಪೊಲೀಸರು ಈ ಬಗ್ಗೆ ಕೇಸು ದಾಖಲಿಸಿಕೊಂಡಿದ್ದಾರೆ. ಪುರುಷೋತ್ತಮ ರಾವ್- ಪ್ರಫುಲ್ಲ ದಂಪತಿ ಪುತ್ರನಾಗಿರುವ ಗಿರೀಶ್, ಪತ್ನಿ ಸುಮನ, ಮಕ್ಕಳಾದ ಶೈನ್, ಶರತಿ, ಸಹೋದರ ರಾಜೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.