ಸ್ಕೂಟರ್‌ನಲ್ಲಿ ತಲುಪಿದ ಬಾಲಕನ ಸೆರೆ ಹಿಡಿದ ವೀಡಿಯೋ ರೀಲ್ಸ್ ಮಾಡಿದ ಪೊಲೀಸ್‌ಗೆ ಅಮಾನತು
ಕಾಸರಗೋಡು: 250 ವಾಟ್ಸ್‌ಗಿಂತ ಕೆಳಗಿನ ಮೋಟಾರು ಹೊಂದಿದ ಇಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಿದ ವಿದ್ಯಾರ್ಥಿಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಿದ ಸಿವಿಲ್ ಪೊಲೀಸ್ ಆಫೀಸರ್‌ಗೆ ಅಮಾನತು ಲಭಿಸಿದೆ. ಕಾಸರಗೋಡು ಎಆರ್ ಕ್ಯಾಂಪ್‌ನ ಸಿವಿಲ್ ಪೊಲೀಸ್ ಆಫೀಸರ್ ಕೆ. ಸಜೇಶ್‌ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭಾರತ್ ರೆಡ್ಡಿ ಅಮಾನತು ಮಾಡಿದ್ದಾರೆ. ಲೈಸನ್ಸ್, ನಂಬರ್ ಪ್ಲೇಟ್ ಇಲ್ಲದೆ ಚಲಾಯಿಸಲು ಸಾಧ್ಯವಿರುವ ವಿಭಾಗಕ್ಕೆ ಸೇರಿದ ಸ್ಕೂಟರ್ ಓಡಿಸಿದ ಬಾಲಕನನ್ನು ತಡೆದ ಪೊಲೀಸ್ ಹೆಲ್ಮೆಟ್ ಖರೀದಿಸುವಂತೆ ಒತ್ತಾಯಿಸಿ 3 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಹಿಡಿದಿಟ್ಟಿರುವುದಾಗಿ ದೂರಲಾಗಿತ್ತು.
ಸ್ಕೂಟರ್ ವಶಪಡಿಸಿದ ದೃಶ್ಯವನ್ನು ಸಜೇಶ್ ಬಳಿಕ ರೀಲ್ಸ್ ಆಗಿ ಮಾಡಿ ಪ್ರಚಾರಪಡಿಸಿದ್ದರು. ಇದರಿಂದ ಬಾಲಕನಿಗೆ ಹೊರ ಗಿಳಿಯಲು ಸಾಧ್ಯವಾಗದ ಸ್ಥಿತಿ ಉಂಟಾಗಿರುವುದಾಗಿ ಹೆತ್ತವರು ಠಾಣೆಗೆ ತಲುಪಿ ದೂರು ನೀಡಿದ್ದರು.
ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸಿಗೆ ಆಸ್ಪದವಾದ ಘಟನೆ ನಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕುಟುಂಬ ದೂರು ನೀಡಿತ್ತು.