ಹಂದಿಗೆ ಇರಿಸಿದ ಸ್ಫೋಟಕ ವಸ್ತು ಸಿಡಿದು ನಾಯಿ ಸಾವು: . ಬೇಟೆಗಾರ ತಂಡದ ಓರ್ವ ಸೆರೆ; ಮದ್ದು ಗುಂಡುಗಳು, ಜೀಪು ವಶ . ಆಟೋ ರಿಕ್ಷಾ ಸಹಿತ ಹಲವರು ಪರಾರಿ
ಕುಂಬಳೆ: ಕಾಡು ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕ ವಸ್ತು ಸಿಡಿದು ಸಾಕುನಾಯಿ ಸಾವಿಗೀಡಾದ ಘಟನೆ ನಡೆದಿದೆ. ಈ ವಿಷಯ ತಿಳಿದು ನಾಗರಿಕರು ಸ್ಥಳಕ್ಕೆ ತಲುಪುತ್ತಿದ್ದಂತೆ ಬೇಟೆಗಾರರು ಓಡಿ ಪರಾರಿಯಾ ಗಿದ್ದಾರೆ. ಇದೇ ವೇಳೆ ಬೇಟೆಗಾರರು ತಲುಪಿದ ಜೀಪನ್ನು ನಾಗರಿಕರು ತಡೆದು ನಿಲ್ಲಿಸಿ ಅದರ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕುಂಡಂಕುಳಿ ನಿವಾಸಿ ಉಣ್ಣಿಕೃಷ್ಣನ್ (48) ಎಂಬಾತ ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ಈತನನ್ನು ಪೊಲೀಸರು ತನಿಖೆಗೊಳ ಪಡಿ ಸುತ್ತಿದ್ದಾರೆ. ಹೇರೂರು ಮೀಪಿರಿ ಎಂಬಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಮೀಪಿರಿ ಬಳಿಯ ಕಾಡು ಪ್ರದೇಶದಲ್ಲಿ ನಿನ್ನೆ ರಾತ್ರಿ ೯.೧೫ರ ವೇಳೆ ಸ್ಫೋಟದ ಸದ್ದು ಕೇಳಿಬಂದಿತ್ತು. ವಿಷಯ ತಿಳಿದು ಸ್ಥಳೀಯರು ಅಲ್ಲಿಗೆ ತೆರಳಿ ನೋಡಿದಾಗ ಮೀಪಿರಿಯ ಕೊರಗಪ್ಪ ಎಂಬವರ ನಾಯಿ ಸತ್ತು ಬಿದ್ದಿತ್ತು. ಸ್ಫೋಟಕ ವಸ್ತು ಸಿಡಿದು ನಾಯಿ ಸತ್ತಿರುವುದಾಗಿ ಖಚಿತಗೊಂಡಿದ್ದು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಅಲ್ಲಿಗೆ ತಲುಪಿದ್ದಾರೆ. ಈ ವೇಳೆ ಬೇಟೆಗಾರರು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಇದೇ ವೇಳೆ ಬೇಟೆಗಾರರು ತಲುಪಿದ ಜೀಪನ್ನು ನಾಗರಿಕರು ತಡೆದು ನಿಲ್ಲಿಸಿ ಚಾಲಕ ಉಣ್ಣಿಕೃಷ್ಣನ್‌ನನ್ನು ಹಿಡಿದಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ ಗಣೇಶ್, ಎಎಸ್‌ಐ ಬಾಬುರಾಜ್ ಎಂಬಿವರು ಸ್ಥಳಕ್ಕೆ ತಲುಪಿ ಜೀಪು ಹಾಗೂ ಚಾಲಕನನ್ನು ಕಸ್ಟಡಿಗೆ ತೆಗೆದಿದ್ದಾರೆ. ಹತ್ತು ಮಂದಿ ಬೇಟೆಗಾರರು ಜೀಪು ಹಾಗೂ ಆಟೋ ರಿಕ್ಷಾದಲ್ಲಿ ತಲುಪಿ ದ್ದರೆನ್ನಲಾಗಿದೆ. ಈ ಪೈಕಿ 9 ಮಂದಿ ಆಟೋ ರಿಕ್ಷಾದಲ್ಲಿ ಪರಾರಿಯಾಗಿ ದ್ದಾರೆಂದು ಸಂಶಯಿ ಸಲಾಗಿದೆ. ಪರಾರಿಯಾದವರಿಗಾಗಿ ಶೋಧ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಕುಂಬಳೆ ಭಾಸ್ಕರನಗರದಲ್ಲೂ ಇದೇ ರೀತಿ ಸ್ಫೋಟಕ ವಸ್ತು ಸಿಡಿದು ಒಂದು ನಾಯಿ ಸಾವಿಗೀಡಾದ ಘಟನೆ ನಡೆದಿತ್ತು.