ಹಟ್ಟಿಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ
ಬೋವಿಕ್ಕಾನ: ಇರಿಯಣ್ಣಿ, ತೀಯಡ್ಕದಲ್ಲಿ ಚಿರತೆಯ ಉಪಟಳ ತೀವ್ರಗೊಂಡಿದೆ. ಇಂದು ಮುಂಜಾನೆ 4.30ರ ವೇಳೆ ಮನೆಯೊಂದರ ಸಮೀಪಕ್ಕೆ ತಲುಪಿದ ಚಿರತೆ ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ ನಡೆಸಿದೆ.
ಕರುವಿನ ಕೂಗು ಕೇಳಿ ಎಚ್ಚರಗೊಂಡ ಮನೆಯವರು ಬೆಳಕು ಹಾಯಿಸಿದಾಗ ಚಿರತೆ ಓಡಿ ಹೋಗಿದೆ. ತೀಯಡ್ಕದ ಕುಂಞಂಬು ಎಂಬವರ ಮನೆ ಸಮೀಪದ ಹಟ್ಟಿಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ ನಡೆಸಿದೆ. ದಾಳಿಯಿಂದ ಕರುವಿನ ಕುತ್ತಿಗೆ ಹಾಗೂ ಕಿವಿಯಲ್ಲಿ ಗಾಯಗಳುಂಟಾಗಿದೆ. ನಿರಂತರ ಎರಡನೇ ಬಾರಿ ಚಿರತೆ ತೀಯಡ್ಕಕ್ಕೆ ತಲುಪಿದೆ.
ಕಳೆದ ಗುರುವಾರ ಜನವಾಸ ಕೇಂದ್ರಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಕಾಡುಕೋಣದ ಮೇಲೆ ಚಿರತೆ ದಾಳಿ ನಡೆಸಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲಿಸಿದರೂ ಚಿರತೆಯ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಬೇಡಡ್ಕ ಪಂಚಾಯತ್‌ನ ಕೊಳತ್ತೂರು, ಕಡುವನತೊಟ್ಟಿ, ಶಂಕರಂಕಾಡ್ ಎಂಬಿಡೆಗಳಲ್ಲಿ ನಿನ್ನೆ ಮುಂಜಾನೆ ಚಿರತೆ ಕಂಡುಬಂದಿತ್ತು. ಕೃಷ್ಣ ಕುಮಾರ್ ಎಂಬವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್‌ಗಾಗಿ ತಲುಪಿದವರಿಗೆ ಚಿರತೆ ಕಾಣಿಸಿದೆ.