ಮಂಜೇಶ್ವರ; ಹಲವು ಮಾದಕ ವಸ್ತು ಪ್ರಕರಣಗಳಲ್ಲಿ ಆರೋಪಿಯಾದ ಮುಳಿಂಜ ಪತ್ವಾಡಿಯ ಅಸ್ಕರ್ ಅಲಿ (27) ಎಂಬಾತನನ್ನು ಪಿಟ್ ಎನ್‌ಡಿಪಿಎಸ್ ಪ್ರಕಾರ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರದಲ್ಲಿ 3.407 ಕಿಲೋ ಗ್ರಾಂ ಎಂಡಿಎಂಎ, 642.65 ಗ್ರಾಂ ಗಾಂಜಾ, 96.96 ಗ್ರಾಂ ಕೊಕೈನ್ ವಶಪಡಿಸಿದ ಪ್ರಕರಣ ಹಾಗೂ ಮೇಲ್ಪರಂಬ ಪೊಲೀಸರು 49.30 ಗ್ರಾಂ ಎಂಡಿಎಂಎ ವಶಪಡಿಸಿದ ಪ್ರಕರಣದಲ್ಲಿ ಅಸ್ಕರ್ ಅಲಿ ಮುಖ್ಯ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಕೇರಳ ಹಾಗೂ ಕರ್ನಾಟಕ ಕೇಂದ್ರೀಕರಿಸಿ ಕಾರ್ಯಾಚರಿಸುವ ಮಾದಕ ವಸ್ತು ದಂಧೆಯ ಮುಖ್ಯ ಕೊಂಡಿಯಾಗಿದ್ದಾನೆ. ಅಲ್ಲದೆ ಹಲವು ಬಾರಿ ಈತ ಮಾದಕ ವಸ್ತುಗಳನ್ನು ಇತ್ತ ಸಾಗಿಸಿರುವುದಾಗಿ ಸೂಚನೆ ಲಭಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಈತನ ಬಂಧನದೊಂದಿಗೆ ಪಿಟ್‌ಎನ್‌ಡಿಪಿಎಸ್ ಕಾಯ್ದೆ ಪ್ರಕಾರ ಒಂದು ವಾರದಲ್ಲಿ ಮಂಜೇಶ್ವರ ಪೊಲೀಸರು ಸೆರೆ ಹಿಡಿದವರ ಸಂಖ್ಯೆ ಎರಡಕ್ಕೇರಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯನ್ ಭಾರತ್ ರೆಡ್ಡಿಯವರ ನಿರ್ದೇಶ ಪ್ರಕಾರ ಡಿವೈಎಸ್‌ಪಿ ಸುನಿಲ್ ಕುಮಾರ್ ಸಿ.ಕೆ.ಯವರ ಮೇಲ್ನೋಟದಲ್ಲಿ ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್, ಎಸ್.ಐ. ರತೀಶ್‌ಗೋಪಿ, ಎಸ್.ಸಿ.ಪಿ.ಒ ಅಬ್ದುಲ್ ಶುಕೂರ್, ಸಿಪಿಒಗಳಾದ ವಿಜಯನ್, ವಂದನ ಸಜೀಶ್ ಎಂಬಿವರು ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಜಿಲ್ಲೆಯಲ್ಲಿ ಮಾದಕ ವಸ್ತು ಮಾಫಿಯಾಗಳನ್ನು ಹತ್ತಿಕ್ಕಲು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

 
								 
															





