ಹಾನಿಗೀಡಾದ ಚರಂಡಿ ದುರಸ್ತಿಗೆ ಕ್ರಮವಿಲ್ಲ : ನಗರದ ತ್ಯಾಜ್ಯ ನೀರು ಕರಂದಕ್ಕಾಡ್ ಬೀಜೋತ್ಪಾದನಾ ಕೇಂದ್ರದ ಗದ್ದೆಗೆ
ಕಾಸರಗೋಡು: ಚರಂಡಿಯಿಂದ ತ್ಯಾಜ್ಯನೀರು ಹರಿದು ಕೃಷಿ ಇಲಾಖೆ ಯ ಗದ್ದೆಯಲ್ಲಿ ತುಂಬಿಕೊಂಡ ಪರಿಣಾಮ ಕೃಷಿ ನಡೆಸಲಾಗದ ಸ್ಥಿತಿ ಉಂಟಾಗಿದೆ.
ಕೃಷಿ ಇಲಾಖೆಯ ಕರಂದಕ್ಕಾಡ್ ನಲ್ಲಿರುವ ಬೀಜೋತ್ಪಾದನೆ ಕೇಂದ್ರದ ಬಯಲಿನಲ್ಲಿ ತ್ಯಾಜ್ಯ ನೀರು ಹಲವು ಕಾಲದಿಂದ ತುಂಬಿಕೊಳ್ಳುತ್ತಿದೆ. ನಗರ ದ ಬ್ಯಾಂಕ್ ರೋಡ್ ಮೂಲಕ ಸಾಗುವ ಚರಂಡಿಯಲ್ಲಿ ನಗರದ ಹೋಟೆಲ್, ವಸತಿ ಸಮುಚ್ಛಯ ಸಹಿತ ವಿವಿಧೆಡೆಗೆ ನೀರು ಹರಿದು ಹೋಗುತ್ತಿದೆ. ಕೃಷಿ ಇಲಾಖೆಯ ಗದ್ದೆಯ ಸಮೀಪ ಈ ಚರಂಡಿ ಬಿರುಕುಬಿಟ್ಟು ತ್ಯಾಜ್ಯ ನೀರು ನೇರವಾಗಿ ಗದ್ದೆಗೆ ಹರಿದು ಸೇರುತ್ತಿದೆ. ಪಾಯಿಖಾನೆ ಮಲಿನಜಲ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳೂ ಇದರಲ್ಲಿ ಸೇರಿಕೊಂಡಿದ್ದು, ಇದರಿಂದ ಗದ್ದೆಗೆ ಇಳಿಯಲಾಗದ ಸ್ಥಿತಿ ಉಂಟಾಗಿದೆಯೆಂದು ಬೀಜೋತ್ಪಾ ದನಾ ಕೇಂದ್ರದ ಅಧಿಕಾರಿಗಳು ಹಾಗೂ ನೌಕರರು ತಿಳಿಸುತ್ತಿದ್ದಾರೆ. ಗದ್ದೆಗೆ ಇಳಿದಲ್ಲಿ ಕೈಕಾಲು ತುರಿಕೆ ಸಹಿತ ಅಸೌಖ್ಯ ಕಾಣಿಸಿಕೊಳ್ಳುತ್ತಿರುವು ದಾಗಿಯೂ ದೂರಲಾಗಿದೆ. ಕಳೆದ ಎರಡು ವರ್ಷಗಳಿಂದ ಈ ರೀತಿಯಲ್ಲಿ ತ್ಯಾಜ್ಯ ನೀರು ಚರಂಡಿಯಿಂದ ನೇರವಾಗಿ ಗದ್ದೆಗೆ ಹರಿದು ಸೇರುತ್ತಿದೆ. ಈ ಹಿಂದೆ ಈ ಸಮಸ್ಯೆಯನ್ನು ವಿವರಿಸಿ ಸೂಕ್ತ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಚರಂಡಿ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೂ ಯಾವುದೇ ಪರಿಹಾರ ಉಂಟಾಗಿಲ್ಲವೆಂದು ದೂರಲಾಗಿದೆ.
ತ್ಯಾಜ್ಯ ನೀರು ತುಂಬಿಕೊಂಡ ಪರಿಣಾಮ ಸುಮಾರು ೮ ಎಕರೆಸ್ಥಳ ಇದೀಗ ಕೃಷಿ ನಡೆಸಲಾಗದ ಸ್ಥಿತಿ ಉಂಟಾಗಿದೆ. ಮೇ ಮೊದಲ ವಾರ ಗದ್ದೆಯಲ್ಲಿ ಉಳುಮೆ ಮಾಡಿ ಭತ್ತ ಕೃಷಿ ನಡೆಸಬೇಕಾಗಿದೆ. ಆದರೆ ಗದ್ದೆಯಲ್ಲಿ ತ್ಯಾಜ್ಯ ನೀರು ತುಂಬಿಕೊಂಡಿರುವುದರಿಂದ ಆ ಕೆಲಸ ಸಾಧ್ಯವಾಗದು ಎಂಬ ಆತಂಕ ಸೃಷ್ಟಿಯಾಗಿದೆಯೆಂದು ಬೀಜೋತ್ಪಾದನಾ ಕೇಂದ್ರದ ಅಧಿಕಾರಿಗಳು ತಿಳಿಸುತ್ತಿದ್ದಾರೆ.