ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ವಿಧಿವಶ

ಕಾಸರಗೋಡು: ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ (76) ನಿಧನಹೊಂದಿದರು. ನಿನ್ನೆ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದ ಶ್ರೀಧರ ರಾವ್‌ರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಸಂಭವಿಸಿದೆ.

ಮೂಲತಃ ಕುಂಬಳೆ ನಾಯ್ಕಾಪು ನಿವಾಸಿಯಾದ  ಶ್ರೀಧರ ರಾವ್ ಸುಮಾರು 40 ವರ್ಷಗಳಿಂದ ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿ ಬೇರಿಕೆ ಎಂಬಲ್ಲಿ ವಾಸವಾಗಿದ್ದರು.

ಮೃತರು ಪತ್ನಿ ಸುಲೋಚನ (ನಿವೃತ್ತ ಅಧ್ಯಾಪಿಕೆ), ಮಕ್ಕಳಾದ ಗಣೇಶ್ ಪ್ರಸಾದ್  (ಪತ್ರಕರ್ತ), ಕೃಷ್ಣ ಪ್ರಸಾದ್, ದೇವಿ ಪ್ರಸಾದ್, ಸೊಸೆಯಂದಿರಾದ ಉಮಾ, ಗಾಯತ್ರಿ, ಸಹೋದರ-ಸಹೋ ದರಿಯರಾದ ನಾರಾಯಣ, ಗೋಪಾಲ, ರಾಮ, ಶಶಿಕಲಾ, ವಸಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಸಹೋದರರಾದ ಶಂಕರ ಹಾಗೂ ರವಿ ಈ ಹಿಂದೆ ನಿಧನರಾಗಿದ್ದಾರೆ.

ಕೂಡ್ಲು, ಮೂಲ್ಕಿ, ಇರಾ, ಕರ್ನಾಟಕ, ಧರ್ಮಸ್ಥಳ ಮೇಳಗಳಲ್ಲಿ ಆರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಕುಂಬ್ಳೆ ಶ್ರೀಧರ ರಾವ್ ಅವರು ಧರ್ಮಸ್ಥಳ ಮೇಳದಲ್ಲಿ ನಿರಂತರ 50 ವರ್ಷಗಳ ಕಾಲ ಸೇವೆ ಮಾಡಿದ್ದರು. ಪುರುಷ ವೇಷ ಹಾಗೂ ಸ್ತ್ರೀವೇಷದಲ್ಲೂ ಪ್ರಸಿದ್ಧರಾಗಿದ್ದರು.

ಸೀತೆ, ಲಕ್ಷ್ಮಣ, ಈಶ್ವರ, ಲಕ್ಷ್ಮಿ, ವಿಷ್ಣು, ದಮಯಂತಿ, ಭೀಷ್ಮ, ಅಂಬೆ, ದೇವಿ ಮಹಾತ್ಮೆಯ ದೇವಿ ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದರು.  ಕೊರಗ ಶೆಟ್ಟಿಯವರ ಇರಾ ಮೇಳದಲ್ಲಿ ಯಕ್ಷಪಯಣ ಆರಂಭಿಸಿದ ಶ್ರೀಧರ ರಾವ್ ಯಕ್ಷಗಾನ ದಿಗ್ಗಜ ಶೇಣಿಯವರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿ, ತಾರೆಯಾಗಿ ಸಾಥ್ ನೀಡಿದ್ದರು.

ವಿವಿಧ ಮೇಳಗಳಲ್ಲಿ ಯಕ್ಷಗಾನ ಸೇವೆ ಮಾಡಿದ್ದ ಶ್ರೀಧರ ರಾವ್ ಶ್ರೀ ಧರ್ಮಸ್ಥಳ ಮೇಳದಿಂದ ನಿವೃತ್ತಿ ಹೊಂದಿದ್ದರು. ಶ್ರೀಧರ ರಾವ್‌ರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಎಡನೀರು ಮಠದಲ್ಲಿ ಸನ್ಮಾನ ಸೇರಿದಂತೆ ಹಲವು ಸನ್ಮಾನ ಗೌರವಗಳನ್ನು ನೀಡಲಾಗಿತ್ತು.

ಮೃತರಿಗೆ ಯಕ್ಷಗಾನ ಕಲಾವಿದರ ಸಹಿತ ನೂರಾರು ಮಂದಿ ಅಂತಿಮ ನಮನ ಸಲ್ಲಿಸಿದ್ದರು.  ಬಳಿಕ ನೆಕ್ಕಿಲಾಡಿ ಬೇರಿಕೆಯಲ್ಲಿ ಮೃತದೇಹದ ಅಂತ್ಯಸಂಸ್ಕಾರ ನಡೆಸಲಾಯಿತು.

You cannot copy contents of this page