ಹೊಸದುರ್ಗದಿಂದ ಬಂಧಿತನಾದ ಬಾಂಗ್ಲಾದೇಶ ಪ್ರಜೆಯ ಆರ್ಥಿಕ ಮೂಲ, ವಿದೇಶ ನಂಟಿನ ಬಗ್ಗೆ ಸಮಗ್ರ ತನಿಖೆ
ಕಾಸರಗೋಡು: ಹೊಸದುರ್ಗ ಬಲ್ಲಾ ಆವಿ ಪೂಡಂಕಲ್ಲಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಅಕ್ರಮವಾಗಿ ನೆಲೆಸಿ ಅಲ್ಲಿಂದ ಎರಡು ದಿನಗಳ ಹಿಂದೆ ಹೊಸದುರ್ಗ ಪೊಲೀಸರ ಸಹಾಯ ದೊಂದಿಗೆ ಕಣ್ಣೂರು ಭಯೋತ್ಪಾದಕ ನಿಗ್ರಹದಳ (ಎಟಿಎಸ್) ಬಂಧಿಸಿದ ಬಾಂಗ್ಲಾದೇಶದ ಪ್ರಜೆ ಶಾಬೀರ್ ಶೇಖ್ ನಾಬಿಯ ಅಲಿಯಾಸ್ ಅತಿಯಾರ್ ರಹ್ಮಾನ್ (22) ವಿದೇಶ ನಂಟು ಹೊಂ ದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದು, ಅದರಿಂದ ಆ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಈತ ಕಳೆದ ಐದು ವರ್ಷ ಗಳಿಂದ ಕೇರಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದನು. ಮಾತ್ರವಲ್ಲ ಈತ ಒಂದಕ್ಕಿಂತ ಹೆಚ್ಚು ಮೊಬೈಲ್ ನಂಬ್ರಗಳ ಮೂಲಕ ಬಾಂಗ್ಲಾದೇಶಕ್ಕೆ ಪದೇ ಪದೇ ಕರೆ ಮಾಡುತ್ತಿದ್ದನು. ಖಾಯಂ ನಂಬ್ರ ಹೊಂದಿದ ಯಾವುದೇ ಮೊಬೈಲ್‌ನಿಂದ ಆತ ಫೋನ್ ಕರೆ ಮಾಡುತ್ತಿರಲಿಲ್ಲ. ಈತ ಕೇರಳದಲ್ಲಿ ಗಾರೆ ಕಾರ್ಮಿಕನ ಸೋಗಿನಲ್ಲಿ ದುಡಿಯುತ್ತಿದ್ದನು. ಆದರೆ ಆತ ಭಾರೀ ಮೊತ್ತದ ಹಣ ವನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ ಕೊಡುತ್ತಿದ್ದನು. ಓರ್ವ ಗಾರೆ ಕಾರ್ಮಿಕನಾಗಿರುವ ವ್ಯಕ್ತಿ ಇಷ್ಟೊಂದು ಸಂಖ್ಯೆಯ ಹಣವನ್ನು ಊರಿಗೆ ಕಳುಹಿಸಿಕೊಡುತ್ತಿರುವುದು ಶಂಕೆಗೆ ಎಡೆಮಾಡಿಕೊಟ್ಟಿದೆ. ಆದ್ದರಿಂದ ಆತನಿಗೆ ಲಭಿಸುತ್ತಿದ್ದ ಆರ್ಥಿಕ ಮೂಲದ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ತನಿಖೆ ಆರಂಭಿಸಿದ್ದಾರೆ. ಅದಕ್ಕಾಗಿ ಆತನನ್ನು ಮತ್ತೆ ತಮ್ಮ ಕಸ್ಟಡಿಗೆ ತೆಗೆದುಕೊಂಡು ಸಮಗ್ರ ವಿಚಾರಣೆಗೊಳಪಡಿಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಇನ್ನೊಂದೆಡೆ ಕೇಂದ್ರ ತನಿಖಾ ತಂಡಗಳು ಸಮಾನಂತರ ತನಿಖೆ ಆರಂಭಿಸಿದೆ.
ಎರ್ನಾಕುಳಂ ಜಿಲ್ಲೆಯ ಪೆರುಂಬಾವೂರಿನಿಂದ ಇತ್ತೀಚೆಗಷ್ಟೇ ಪೊಲೀಸರಿಂದ ಬಂಧಿತರಾಗಿದ್ದ ೫೦ಕ್ಕೂ ಹೆಚ್ಚು ಬಾಂಗ್ಲಾದೇಶೀಯ ರೊಂದಿಗೂ ಅತಿಯಾರ್ ರಹ್ಮಾನ್ ಸದಾ ಸಂಪರ್ಕದಲ್ಲಿದ್ದನೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.